newsics.com/ನ್ಯೂಸಿಕ್ಸ್
ಬೆಂಗಳೂರು: . ಸಣ್ಣಪುಟ್ಟ ಕಾರಣಕ್ಕೆ ದಂಪತಿಗಳ ನಡುವೆ ನಡೆದ ಗಲಾಟೆಗೆ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಪವಿತ್ರಾ ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಕ್ಕಳಾದ ನಿವೇದಾ (4 ವರ್ಷ) ಹಾಗೂ ನಿರ್ಮಲ್ (2 ವರ್ಷ) ಗೆ ವಿಷವುಣಿಸಿ, ಬಳಿಕ ತಾನು ಕೂಡ ವಿಷ ಸೇವಿಸಿದ್ದಾರೆ.
ಮತ್ತಿಕೆರೆ ನಿವಾಸಿಗಳಾದ ಪ್ರಶಾಂತ್ ಮತ್ತು ಪವಿತ್ರಾ ದಂಪತಿಗಳ ನಡುವೆ ಕಳೆದ ಕೆಲ ದಿನಗಳಿಂದ ಕೌಟುಂಬಿಕ ವಿಚಾರವಾಗಿ ಅಸಮಾಧಾನವಿತ್ತು ಎನ್ನಲಾಗಿದೆ. ಎಂದಿನಂತೆ ಪತಿ-ಪತ್ನಿ ನಡುವೆ ತೀವ್ರ ಗಲಾಟೆ ನಡೆದಿದ್ದು, ಇದರಿಂದ ಮನನೊಂದ ಪವಿತ್ರಾ ತೀವ್ರ ನಿರ್ಧಾರ ಕೈಗೊಂಡಿದ್ದಾರೆ.
ಇಂದು ಬೆಳಿಗ್ಗೆ ಪತಿ ಪ್ರಶಾಂತ್ ನಿದ್ರೆಯಿಂದ ಎದ್ದಾಗ ಪತ್ನಿ ಮತ್ತು ಮಕ್ಕಳು ಅಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಗಾಬರಿಗೊಂಡ ಅವರು ಸ್ಥಳೀಯರ ಸಹಾಯದೊಂದಿಗೆ ಮೂವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ವಿಷದ ಪ್ರಭಾವ ಹೆಚ್ಚಾಗಿದ್ದರಿಂದ ನಿವೇದಾ ಮತ್ತು ನಿರ್ಮಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಸದ್ಯ ತಾಯಿ ಪವಿತ್ರಾ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಯಶವಂತಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.