newsics.com
ದೇಶದ ಅತಿ ದೊಡ್ಡ ಐಟಿ ಕಂಪನಿ ಟಿಸಿಎಸ್’ನಲ್ಲಿ ಮತಾಂತರ ದಂಧೆ ನಡೆಯುತ್ತಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿತ್ತು. ನಾಸಿಕ್ ಟಿಸಿಎಸ್ ಕ್ಯಾಂಪಸ್’ನಲ್ಲಿದ್ದ ಕೆಲವರ ಕರಾಳ ಮುಖ ಬಯಲಾಗಿದೆ.
ಈಗ ತನಗಾದ ಕೆಟ್ಟ ಘಟನೆಯನನ್ನು ಬಹಿರಂಗಪಡಿಸಿರುವ ಮಹಿಳೆ ನಾಸಿಕ್‌ನಲ್ಲಿರುವ ಟಿಸಿಎಸ್ ಸಂಸ್ಥೆಗೆ ಅಸೋಸಿಯೆಟ್ ಆಗಿ ಉದ್ಯೋಗಕ್ಕೆ ಸೇರಿದ್ದರು. ಆಗಷ್ಟೇ ಅವರ ಮದುವೆಯೂ ಆಗಿತ್ತು. ತಮ್ಮ ಸಂಸ್ಥೆಯಲ್ಲಿ ಹಿಂದೂ ಉದ್ಯೋಗಿಗಳ ಮೇಲೆ ಮ್ಯಾನೇಜರ್ ಮಟ್ಟದ ಅಧಿಕಾರಿಗಳು ಹಾಗೂ ಹೆಚ್ ಆರ್‌ಗಳು ನಡೆಸುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಪುರುಷ ಉದ್ಯೋಗಿಗಳ ಬಲವಂತದ ಮತಾಂತರದ ಬಗ್ಗೆ ಬಾಯ್ಬಿಟ್ಟ 8ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳ ಪೈಕಿ ಇವರು ಒಬ್ಬರಾಗಿದ್ದಾರೆ.
ತನ್ನ ಪತಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಿದ್ದರಿಂದ ತಾನು ನಾಸಿಕ್‌ನಲ್ಲಿ ತನ್ನ ಅತ್ತೆ ಮಾವನ ಜೊತೆ ವಾಸ ಮಾಡುತ್ತಿದ್ದೆ ನನ್ನ ಮದುವೆಯ ನಂತರ 2025ರ ಜೂನ್‌ನಿಂದ ನಾನು ಟಿಸಿಎಸ್‌ನ ನಾಸಿಕ್ ಸಂಸ್ಥೆಯಲ್ಲಿ ಅಸೋಸಿಯೇಟ್ ಆಗಿ ಕೆಲ ಮಾಡುತ್ತಿದ್ದೆ. 2025ರ ಜೂನ್ 24ರಿಂದ ನನ್ನ ಮೂರು ತಿಂಗಳ ತರಬೇತಿ ಅವಧಿ ಇಲ್ಲಿ ಆರಂಭವಾಯ್ತು. ಶಾರುಖ್ ಖುರೇಷಿ ಹಾಗೂ ಜಯೇಶ್ ಗುಂಜಲ್ ಎಂಬುವವರು ನನಗೆ ತರಬೇತಿ ನೀಡುತ್ತಿದ್ದರು ಎಂದು ಮಹಿಳೆ ವಿಚಾರಣೆಯಲ್ಲಿ ಹೇಳಿದ್ದಾರೆ.
ರಾಝಾ ಮೆನನ್ ಎಂಬಾತ ತಮ್ಮ ತರಬೇತಿ ಕೊಠಡಿಗೆ ಬರುತ್ತಿದ್ದ. ಆತನಿಗೂ ತರಬೇತಿಗೂ ಯಾವುದೇ ಸಂಬಂಧ ಇರಲಿಲ್ಲ, ಆದರೂ ಆತ ಅಲ್ಲಿಗೆ ಬಂದು ತನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಿದ್ದ. ನಿನ್ನ ಗಂಡ ನಿನ್ನಿಂದ ದೂರ ವಾಸ ಮಾಡುತ್ತಿರುವುದರಿಂದ ನಿನಗೆ ಎಲ್ಲವನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆಯೇ? ನಿನಗೆ ಭಯವಾಗುವುದಿಲ್ಲವೇ? ನಿಮಗೆ ನನ್ನ ಸಹಾಯ ಬೇಕಿದ್ದರೆ ನನಗೆ ಹೇಳಿ ನಾನು ನಿಮಗೆ ಯಾವುದೇ ಸಮಯದಲ್ಲಿ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಆತ ಹೇಳುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಆಗ ತನಗೆ ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಆದರೂ ಆತ ನನ್ನ ವೈವಾಹಿಕ ಜೀವನದ ಬಗ್ಗೆ ಆಗಾಗ ಕಾಮೆಂಟ್ ಮಾಡುತ್ತಲೇ ಇದ್ದ. ನೀನು ಈಗಷ್ಟೇ ಮದುವೆಯಾಗಿದ್ದಿಯಾ? ಹನಿಮೂನ್‌ಗೆ ಎಲ್ಲಿಗೆ ಹೋಗುತ್ತಿದ್ದಿಯಾ? ಅಲ್ಲಿ ಏನು ಮಾಡುತ್ತೀಯಾ ಎಂದೆಲ್ಲಾ ಆತ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದ. ಈ ರಾಝಾನ ಈ ರೀತಿಯ ಅಧಿಕಪ್ರಸಂಗಿತನದ ಬಗ್ಗೆ ಟೀಮ್ ಲೀಡರ್ ಖುರೇಷಿ ಬಳಿ ಹೇಳಿದಾಗ ಆ ಟೀಮ್ ಲೀಡರ್ ಆತನ ವರ್ತನೆಯನ್ನು ನಿಯಂತ್ರಿಸುವ ಬದಲು ಆತನನ್ನೇ ಬೆಂಬಲಿಸುತ್ತಿದ್ದ.
ನಿನಗೆ ನಿನ್ನ ಗಂಡನೊಂದಿಗೆ ಹೊಂದಿಕೆಯಾಗದಿದ್ದರೆ, ನಮಗೆ ತಿಳಿಸು ನಾವು ನಿಮಗೆ ನಿಖರವಾಗಿ ಏನು ಮಾಡಬೇಕೆಂದು ಮತ್ತು ಅದನ್ನು ಹೇಗೆ ಮಾಡಬೇಕೆಂದು ಕಲಿಸುತ್ತೇವೆ. ನಿಮಗೆ ಸಾಕಷ್ಟು ಗೆಳೆಯರು ಇದ್ದಿರಬೇಕು. ಅವರೆಲ್ಲರನ್ನೂ ಬಿಟ್ಟು ನೀವು ಹೇಗೆ ಮದುವೆಯಾದಿರಿ? ಆ ಗೆಳೆಯರು ಇನ್ನೂ ಹಿಂದಿನಂತೆಯೇ ನಿಮ್ಮನ್ನು ಬೆನ್ನಟ್ಟುತ್ತಿದ್ದರೆ ಮತ್ತು ನಿಮ್ಮ ಕುಟುಂಬ ಅಥವಾ ಪತಿಗೆ ಅದು ತಿಳಿದಿದ್ದರೆ, ಏನಾಗುತ್ತಿತ್ತು? ನೀವು ಏನು ಮಾಡುತ್ತೀರಿ? ಎಂದು ರಝಾ ತನಗೆ ಕೇಳುತ್ತಾ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ನಾನು ಸೀರೆ ಧರಿಸಿ ಬಂದಿದ್ದೆ. ನಾನು ಲಾಬಿಯ ಮೂಲಕ ಸಾಗಿ ಪ್ಯಾಂಟ್ರಿಯ ಮೂಲಕ ನಡೆಯುತ್ತಿದ್ದಾಗ, ಯಾರೋ ನನ್ನ ಸೀರೆಯ ಸೆರಗನ್ನು ಹಿಡಿದು ಎಳೆದ ಅನುಭವ ಆಯ್ತು. ನಾನು ತಿರುಗಿ ನೋಡಿದಾಗ, ಸೀರೆಯ ಸೆರಗು ರಾಝಾ ಕೈಯಲ್ಲಿತ್ತು. ನಾನು ತಕ್ಷಣ ನನ್ನ ಸೀರೆಯ ಸೆರಗನ್ನು ಹಿಂದಕ್ಕೆ ಎಳೆದಾಗ ಅವನು ನನ್ನನ್ನು ಅಸಭ್ಯವಾಗಿ ನೋಡಿ ಮುಗುಳ್ನಕ್ಕ ಎಂದು ಆ ಮಹಿಳಾ ಉದ್ಯೋಗಿ ಆರೋಪಿಸಿದ್ದಾರೆ.
ನಾಸಿಕ್‌ನಲ್ಲಿ ಟಿಸಿಎಸ್ ಕಂಪನಿಯಲ್ಲಿ ನಡೆದ ಒತ್ತಾಯಪೂರ್ವಕ ಮತಾಂತರ ಹಾಗೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 8 ಜನರನ್ನು ಬಂಧಿಸಿದ್ದಾರೆ.