ಇತ್ತೀಚಿನ ಸಂದರ್ಶನವೊಂದರಲ್ಲಿ ಗಾಯಕ ಚಂದನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಳ ಖಡಕ್ ಆಗಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಎರಡನೇ ಮದುವೆಯ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳಿಗೂ ಅವರು ಉತ್ತರ ನೀಡಿದ್ದಾರೆ. “ಜೀವನದಲ್ಲಿ ಬಾಳಸಂಗಾತಿ ಅನ್ನೋದು ಬಹಳ ಮುಖ್ಯ. ಈಗ ನಮಗೆ ವಯಸ್ಸಿದೆ, ಕೆಲಸವಿದೆ, ಸುತ್ತಲೂ ಜನರಿದ್ದಾರೆ. ಆದರೆ ವಯಸ್ಸಾದ ಮೇಲೆ ಕಾಡುವ ಆ ಒಂಟಿತನ ಇದೆಯಲ್ಲ, ಅದು ತುಂಬಾ ಭಯಾನಕ. ಆ ಸಮಯದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುವ ಒಬ್ಬರು ಜೊತೆಗಿರಬೇಕು” ಎನ್ನುವ ಮೂಲಕ ಜೀವನದಲ್ಲಿ ಮದುವೆಯ ಮಹತ್ವವನ್ನು ಸಾರಿದ್ದಾರೆ. ಆದರೆ, ಈ ಬಾರಿ ಅವರು ಆತುರದ ನಿರ್ಧಾರ ಮಾಡುವುದಿಲ್ಲವಂತೆ. “ಈಗಾಗಲೇ ಒಂದು ಪರೀಕ್ಷೆ ಎದುರಿಸಿದ್ದೇನೆ, ಮುಂದಿನ ಜೀವನದ ಬಗ್ಗೆ ಸರಿಯಾಗಿ ಯೋಚಿಸಿ, ಸಮಯ ತಗೊಂಡು ಹೆಜ್ಜೆ ಇಡುತ್ತೇನೆ” ಎನ್ನುವುದು ಅವರ ಪ್ಲಾನ್.
“ಗಾಯ ಮಾಯಲು ಸಮಯ ಬೇಕು… ನಾನಂತೂ ಡಿಪ್ರೆಶನ್‌ನಲ್ಲಿ ಇಲ್ಲ!”
ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಚಂದನ್ ಒಂದು ಸುಂದರ ಉದಾಹರಣೆ ನೀಡಿದ್ದಾರೆ. “ನಾವು ಕೆಳಗೆ ಬಿದ್ದಾಗ ಗಾಯ ಆಗುವುದು ಸಹಜ, ಆ ಗಾಯ ಮಾಯಲು ಸ್ವಲ್ಪ ಸಮಯ ಹಿಡಿಯುತ್ತದೆ. ನನ್ನ ಜೀವನದಲ್ಲೂ ಅದೇ ಆಗಿದೆ. ಈಗ ಆ ಗಾಯ ಸಂಪೂರ್ಣವಾಗಿ ವಾಸಿಯಾಗಿದೆ. ನಾನು ಆರಾಮವಾಗಿದ್ದೇನೆ, ಖಂಡಿತವಾಗಿಯೂ ಡಿಪ್ರೆಶನ್‌ನಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ನೋವನ್ನೆಲ್ಲ ನುಂಗಿ ಈಗ ಚಂದನ್ ಕಣ್ಣು ಪೂರ್ತಿ ತಮ್ಮ ವೃತ್ತಿಜೀವನದ ಮೇಲಿದೆ.
ರೆಟ್ರೋ ಸ್ಟೈಲ್‌ನಲ್ಲಿ ‘ಎಲ್ರ ಕಾಲೆಳಿಯತ್ತೆ ಕಾಲ’!
ಚಂದನ್ ಶೆಟ್ಟಿ ಈಗ ಕೇವಲ ಗಾಯಕನಾಗಿ ಉಳಿದಿಲ್ಲ, ಸ್ಯಾಂಡಲ್‌ವುಡ್‌ನ ಭರವಸೆಯ ನಟನಾಗಿಯೂ ಮಿಂಚಲು ಸಜ್ಜಾಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದ ಟ್ರೇಲರ್ ಈಗ ಎಲ್ಲೆಡೆ ಸೌಂಡ್ ಮಾಡುತ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾ ನಮ್ಮನ್ನು 90ರ ದಶಕದ ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗಲಿದೆ.
ಏಪ್ರಿಲ್ 17ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡರೆ, ಮಂಜು ಪಾವಗಡ, ತಾರಾ ಮತ್ತು ಸುಜಯ್ ಶಾಸ್ತ್ರಿ ಅವರ ಕಾಮಿಡಿ ಪಂಚ್ ಕೂಡ ಇರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿರುವ ಈ ಸಿನಿಮಾ ಚಂದನ್ ಶೆಟ್ಟಿ ಅವರ ಕೆರಿಯರ್‌ಗೆ ಒಂದು ದೊಡ್ಡ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.