newsics.com
ನವದೆಹಲಿ: ದೇಶದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ಜಾಲತಾಣಗಳ ವಿರುದ್ಧ ಕೇಂದ್ರ ಸರ್ಕಾರ ಇಂದು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಸುಮಾರು 300ಕ್ಕೂ ಹೆಚ್ಚು ಜಾಲತಾಣ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ
ಕೇಂದ್ರ ಸರ್ಕಾರವು ಈವರೆಗೆ ಒಟ್ಟು 8,400 ಅಕ್ರಮ ಜಾಲತಾಣಗಳನ್ನು ಬ್ಲಾಕ್ ಮಾಡಿದೆ. ಗಮನಾರ್ಹ ವಿಷಯವೆಂದರೆ, ಸರ್ಕಾರವು ಹೊಸ ‘ಆನ್‌ಲೈನ್ ಗೇಮಿಂಗ್ ಕಾಯ್ದೆ’ ಜಾರಿಗೆ ತಂದ ನಂತರವೇ ಸುಮಾರು 4,900 ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ.
ಯಾವೆಲ್ಲಾ ಸೈಟ್‌ಗಳ ಮೇಲೆ ಕ್ರಮ?
ಆನ್‌ಲೈನ್ ಕ್ರೀಡಾ ಬೆಟ್ಟಿಂಗ್: ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳ ಮೇಲೆ ಹಣ ಕಟ್ಟಿ ಆಡುವ ಪ್ಲಾಟ್‌ಫಾರ್ಮ್‌ಗಳು.
ಆನ್‌ಲೈನ್ ಕ್ಯಾಸಿನೊಗಳು: ಸ್ಲಾಟ್ಸ್, ರೌಲೆಟ್ ಮತ್ತು ಲೈವ್ ಡೀಲರ್ ಟೇಬಲ್ ಸೌಲಭ್ಯ ನೀಡುವ ಸೈಟ್‌ಗಳು.
ಬೆಟ್ಟಿಂಗ್ ಎಕ್ಸ್‌ಚೇಂಜ್‌ಗಳು: ಒಬ್ಬರಿಗೊಬ್ಬರು (p-2-p) ಬೆಟ್ಟಿಂಗ್ ಕಟ್ಟಲು ಅವಕಾಶ ನೀಡುವ ವೇದಿಕೆಗಳು.
ಸಟ್ಟಾ/ಮಟ್ಕಾ ಜಾಲಗಳು: ಸಂಪ್ರದಾಯಿಕ ಮಟ್ಕಾ ಜೂಜಿನ ಆನ್‌ಲೈನ್ ಆವೃತ್ತಿಗಳು.
ರಿಯಲ್-ಮನಿ ಗೇಮ್ ಆಪ್‌ಗಳು: ಹಣ ಪಣಕ್ಕಿಟ್ಟು ಆಡುವ ಇಸ್ಪೀಟು ಮತ್ತು ಕ್ಯಾಸಿನೊ ಆಟದ ಅಪ್ಲಿಕೇಶನ್‌ಗಳು.
ಇಂತಹ ಅಕ್ರಮ ಜಾಲತಾಣಗಳು ವಿದೇಶಗಳಿಂದ ಕಾರ್ಯಾಚರಿಸುತ್ತಿದ್ದು, ಭಾರತೀಯರ ಹಣ ಲೂಟಿ ಮಾಡುತ್ತಿವೆ. ಇವುಗಳ ಪ್ರಚಾರ ಮಾಡುವ ಅಥವಾ ನಡೆಸುವ ಸಂಸ್ಥೆಗಳ ಮೇಲೆ ಇನ್ನು ಮುಂದೆ ದಂಡ ಮತ್ತು ಜೈಲು ಶಿಕ್ಷೆಯಂತಹ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಿ ಮೂಲಗಳು ಎಚ್ಚರಿಸಿವೆ.