https://youtube.com/shorts/meQfr5hOsT4?si=LcQn9Gs6kHRLRtfy
Subscribe ನ್ಯೂಸಿಕ್ಸ್ ಕನ್ನಡ
newsics.com
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕ್ಯಾಬಿನೆಟ್ ಒಪ್ಪಿಗೆಯಿಲ್ಲದೆ ಸರ್ವಾಧಿಕಾರದಿಂದ ಜಾಗತಿಕ ಸುಂಕಗಳನ್ನು ವಿಧಿಸುವ ಅಧಿಕಾರವಿಲ್ಲ ಎನ್ನುವ ಮೂಲಕ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ಗೆ ದೊಡ್ಡ ಶಾಕ್ ನೀಡಿದೆ. ಅಲ್ಲದೆ, ಟ್ರಂಪ್ ಅವರ ಸುಂಕ ನೀತಿ ಕಾನೂನುಬಾಹಿರ ಎಂದು ಕೂಡ ಹೇಳಿದೆ. ಈ ಮೂಲಕ ಟ್ರಂಪ್ ಅವರ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ 6-3 ಅಂತರದಿಂದ ರದ್ದುಗೊಳಿಸಿದೆ.ಕೋರ್ಟ್ ನಲ್ಲಿ ಟ್ರಂಪ್ ಗೆ ಹಿನ್ನಡೆ ಆಗುವಂತೆ ಮಾಡಿದ್ದು, ಭಾರತೀಯ ಮೂಲದ ಕಾನೂನು ದೈತ್ಯ ನೀಲ್ ಕಟ್ಯಾಲ್.
54ವರ್ಷದ ನೀಲ್ ಕಟ್ಯಾಲ್, ಅಮೆರಿಕಾದ ಅತ್ಯಂತ ವರ್ಚಸ್ಸಿನ ಮತ್ತು ಅನುಭವಿ ವಕೀಲರು. ಸುಪ್ರೀಂಕೋರ್ಟ್’ನಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಹಿಂದಿನ ಬರಾಕ್ ಒಬಾಮಾ ಆಡಳಿತದ ಅವಧಿಯಲ್ಲಿ ಇವರು ಅಮೆರಿಕಾದ ’ಆಕ್ಟಿಂಗ್ ಸಾಲಿಸಿಟರ್ ಜನರಲ್’ ಆಗಿ ಸೇವೆಯನ್ನು ಸಲ್ಲಿಸಿದ್ದರು. ಸಾಂವಿಧಾನಿಕ ವಿಷಯಗಳಲ್ಲಿ ದೇಶದ ಪ್ರಮುಖ ಕಾನೂನು ಸಲಹೆಗಾರರಾಗಿ ಇವರು ಗುರುತಿಸಲ್ಪಡುತ್ತಿದ್ದಾರೆ. ಇವರೇ, ಟ್ರಂಪ್ ಸುಂಕದ ವಿರುದ್ದ ಕೋರ್ಟ್’ನಲ್ಲಿ ವಾದ ಮಂಡಿಸಿದ್ದು.
ಅಮೆರಿಕಾದ ಲೀಡಿಂಗ್ ವಕೀಲರಾದ ನೀಲ್ ಕಟ್ಯಾಲ್ ಅಮೆರಿಕಾದ ಚಿಕಾಗೋ ನಗರದಲ್ಲಿ ಹುಟ್ಟಿದ್ದಾರೆ. ಇವರ ಪೋಷಕರು ಭಾರತದಿಂದ ಯುಎಸ್’ಗೆ ವಲಸೆ ಹೋದವರು. ಇವರ ತಾಯಿ ವೈದ್ಯೆ ಮತ್ತು ತಂದೆ ಇಂಜಿನಿಯರ್ ಆಗಿದ್ದರು. ಪ್ರತಿಷ್ಠಿತ ಯೇಲ್ ಲಾ ಸ್ಕೂಲ್’ನಲ್ಲಿ ಇವರು ಕಾನೂನು ಪದವಿಯನ್ನು ಪಡೆದವರು. ನೀಲ್ ಅವರ ಸಹೊದರಿ ಸೋನಿಯಾ ಕಟ್ಯಾಲ್ ಕೂಡಾ, ಕ್ಯಾಲಿಫೋರ್ನಿಯಾದ ವಿವಿಯಲ್ಲಿ ಕಾನೂನು ವಿಭಾಗದ ಲೆಚ್ಚರರ್ ಆಗಿದ್ದಾರೆ.
ಈ ಹಿಂದೆ ಕೂಡಾ, ಟ್ರಂಪ್ ಜಾರಿಗೆ ತಂದಿದ್ದ, ಮುಸ್ಲಿಂ ದೇಶಗಳ ಮೇಲೆ ಪ್ರಯಾಣ ನಿಷೇಧ ನೀತಿಯ ವಿರುದ್ದವಾಗಿಯೂ ಇವರು ನ್ಯಾಯಾಲಯದಲ್ಲಿ ಹೋರಾಡಿದ್ದರು. ಇಷ್ಟೇ ಅಲ್ಲದೇ, ’ Impeach: The Case Against Donald Trump’ ಎನ್ನುವ ಪುಸ್ತಕವನ್ನೂ ಇವರು ಬರೆದಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಸುಂಕದ ನಿರ್ಧಾರದಿಂದಾಗಿ, ಸಣ್ಣ ಕಂಪೆನಿಗಳಿಗೆ, ಖಾಸಗಿ ಕಂಪೆನಿಗಳಿಗೆ, ಭಾರತದಲ್ಲಿ ಅಗಾಧ ಮಾರುಕಟೆಯನ್ನು ಹೊಂದಿರುವ ಕಂಪೆನಿಗಳಿಗೆ, ಯುಎಸ್ ಮೂಲದ ಸಂಸ್ಥೆಗಳಾಗಿದ್ದರೂ, ಭಾರತದಲ್ಲಿ ಹೆಚ್ಚು ವಹಿವಾಟು ನಡೆಸುತ್ತಿರುವ ಕಂಪೆನಿಗಳಿಗೆ ತೊಂದರೆಯಾಗಿತ್ತು. ನೀಲ್ ಕಟ್ಯಾಲ್, ಇವರೆಲ್ಲರ ಪರವಾಗಿ ವಾದವನ್ನು ಮಂಡಿಸಿದ್ದರು.
ತೆರಿಗೆ ಮತ್ತು ಸುಂಕದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಂಸತ್ತಿಗೆ ಇದೆಯೇ ಹೊರತು, ಅಮೆರಿಕಾದ ಅಧ್ಯಕ್ಷರಿಗೆ ಅಲ್ಲ ಎನ್ನುವುದನ್ನು ನೀಲ್ ಕಟ್ಯಾಲ್, ಸಮರ್ಥವಾಗಿ ಸುಪ್ರೀಂಕೋರ್ಟ್’ನಲ್ಲಿ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂವಿಧಾನವು, ತೆರಿಗೆ ವಿಧಿಸುವ ಅಧಿಕಾರವನ್ನು ಕಾರ್ಯಾಂಗಕ್ಕೆ ನೀಡಿಲ್ಲ, ನೀವು ಇದನ್ನು ಬಳಸಿದ ರೀತಿಯೇ ಕಾನೂನುಬಾಹಿರ ಎಂದು ಟ್ರಂಪ್’ಗೆ ಕೋರ್ಟ್ ಚಾಟಿ ಬೀಸಿದೆ.