https://youtube.com/shorts/Z1cy8EQaCVE?si=-_cWMt02yPVoM0xd
Subscribe ನ್ಯೂಸಿಕ್ಸ್ ಕನ್ನಡ
newsics.com
ಬಳ್ಳಾರಿಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಶಿಲಾಯುಗದ ಕಾಲದ 3ನೇ ಅಸ್ಥಿಪಂಜರ ಪತ್ತೆಯಾಗಿದೆ. ಮಡಿಕೆ ಹೊರ ತೆಗೆಯುವ ವೇಳೆ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ ಸಂಶೋಧಕರು ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.
ಉತ್ಖನನ ಸ್ಥಳಕ್ಕೆ ಬಳ್ಳಾರಿ SP ಡಾ.ಸುಮನ್ ಫನ್ನೆಕರ್ ಭೇಟಿ ನೀಡಿ, ಅಸ್ಥಿಪಂಜರ ಮತ್ತು ಮಡಿಕೆ ಕುರಿತು ಮಾಹಿತಿ ಪಡೆದಿದ್ದಾರೆ.
ಈ ಹಿಂದೆ ಪತ್ತೆಯಾಗಿತ್ತು 2 ಅಸ್ಥಿಪಂಜರಗಳು
ಅಮೆರಿಕಾದ ಹಾರ್ಟ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ಕಾರ್ಯ ನಡೆಸುವ ವೇಳೆ ಕೆಲ ದಿನಗಳ ಹಿಂದಷ್ಟೇ 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಆರಂಭದಲ್ಲಿ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಮಾತ್ರ ಸಿಕ್ಕಿದ್ದವು. ಆದರೆ ಬಳಿಕ ಹೆಚ್ಚಿನ ಆಳ ಅಗೆದಾಗ ಒಂದರ ಪಕ್ಕದಲ್ಲೊಂದು ಅಸ್ಥಿಪಂಜರಗಳು ಕಂಡುಬಂದಿದ್ದವು. ಆ ಬಳಿಕ ದೊರೆತ ಮೂರನೇ ಅಸ್ಥಿಪಂಜರ ಇದಾಗಿದೆ.
ಅಸ್ಥಿಪಂಜರಗಳು ಯಾವುದೇ ರೀತಿಯಲ್ಲೂ ಹಾಳಾಗದೆ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಸಿಕ್ಕಿರುವ ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಎಂದು ಅಂದಾಜಿಸಲಾಗಿದ್ದು, ನಿಖರ ಕಾಲಮಾನದ ನಿರ್ಧಾರ ಕಾರ್ಬನ್ ಡೇಟಿಂಗ್ ಪರೀಕ್ಷೆ ಬಳಿಕ ಅಂತಿಮವಾಗಿ ತಿಳಿಯಬೇಕಿದೆ. ಮೈಸೂರು ಪ್ರಾಶ್ಚವಸ್ತು ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಮ್. ಎಸ್. ನಾಗರಾಜ ರಾವ್ 1964ರಲ್ಲಿ ಇದೇ ತೆಕ್ಕಲಕೋಟೆಯಲ್ಲಿ ಉತ್ಖನನ ನಡೆಸಿದ್ದರು.