https://youtube.com/shorts/2Z4I0oFUbOQ?si=E_8G5fLxr2N6s9QC
Subscribe ನ್ಯೂಸಿಕ್ಸ್ ಕನ್ನಡ
newsics.com
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಉದ್ದೇಶದಲ್ಲಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಹೆಜ್ಜೆ ಹೆಜ್ಜೆಗೂ. ಮಹಾಮೋಸ ಮಾಡುತ್ತಾರೆ. ವಂಚನೆ ಮಾಡುತ್ತಾರೆ. ಹಣ ತೆಗೆದುಕೊಂಡು ಮರಳಿ ನೀಡದೇ ಸತಾಯಿಸುತ್ತಾರೆ. ಇಂತಹದ್ದೇ ಒಂದು ಪ್ರಕರಣದಲ್ಲಿ ಸದ್ಯ ಬಾಲಿವುಡ್ನ ಪ್ರಖ್ಯಾತ ಹಾಸ್ಯ ನಟ ರಾಜ್ಪಾಲ್ ಯಾದವ್ ಅವರಿಗೆ ಹಿನ್ನೆಡೆಯಾಗಿದೆ. ನಾಳೆಯೇ (ಫೆಬ್ರವರಿ 4) ಪೊಲೀಸರಿಗೆ ಶರಣಾಗುವಂತೆ ಹೈಕೋರ್ಟ್ ಆದೇಶವನ್ನು ನೀಡಿದೆ.
2010 ರಲ್ಲಿ ರಾಜಪಾಲ್ ಯಾದವ್ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಹೆಸರು ಅತಾ ಪತಾ ಲಾಪತಾ. ಬಾಕ್ಸಾಫೀಸ್ನಲ್ಲಿ ಹೇಳ ಹೆಸರಿಲ್ಲದಂತೆ ಕಾಣೆಯಾದ ಈ ಚಿತ್ರಕ್ಕೆ ರಾಜ್ ಪಾಲ್ ಯಾದವ್ ಆ ಕಾಲದಲ್ಲಿ 5 ಕೋಟಿ ಸಾಲವನ್ನು ಮಾಡಿದ್ದರು. ಆದರೆ ಹಣ ಮರಳಿ ನೀಡುವಲ್ಲಿ ವಿಫಲರಾಗಿದ್ದರು.
ಆ ನಂತರ ಬಡ್ಡಿ ಸೇರಿ ಈ ಮೊತ್ತ 9 ಕೋಟಿಯಾಗಿತ್ತು. ಆಗಲೂ ಕೂಡ ಹಣ ಮರಳಿ ಬರಲಿಲ್ಲ. ಈ ಹಿನ್ನೆಲೆ ಬೇಸತ್ತು ಎಂ.ಎಸ್ ಮುರಳಿ ಪ್ರೊಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿತ್ತು. ಆಗ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಸೆಷನ್ಸ್ ನ್ಯಾಯಾಲಯ ಕೂಡ 2019ರಲ್ಲಿ ಈ ತೀರ್ಪನ್ನು ಎತ್ತಿ ಹಿಡಿದಿತ್ತು. ಆ ನಂತರ ಬೇರೆ ದಾರಿ ಇಲ್ಲದೆ ರಾಜ್ಪಾಲ್ ಯಾದವ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಮಯದಲ್ಲಿ ಹೈಕೋರ್ಟ್ನ ಪೀಠ ಶಿಕ್ಷೆಯ ಆದೇಶವನ್ನು ರದ್ದು ಮಾಡಿತ್ತು. ಈ ಹಣಕಾಸಿನ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳುವ ಭರವಸೆಯನ್ನು ಆಗ ರಾಜ್ಪಾಲ್ ಯಾದವ್ ನ್ಯಾಯಾಲಯಕ್ಕೆ ನೀಡಿದ್ದರು.
ಇಂದು (ಫೆಬ್ರವರಿ 3) ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಸ್ವರಣ ಕಾಂತ್ ಶರ್ಮಾ, ರಾಜ್ಪಾಲ್ ಯಾದವ್ ಅವರ ವಿರುದ್ಧ ಕಿಡಿ ಕಾರಿದ್ದಾರೆ.
ನ್ಯಾಯಾಲಯ ಕಾಲಾವಕಾಶ ನೀಡಿದರೂ ಕೂಡ ತಮ್ಮ ಮಾತಿಗೆ ರಾಜ್ಪಾಲ್ ಯಾದವ್ ಬದ್ದರಾಗಲಿಲ್ಲ ಎಂದು ಹೇಳಿರುವ ಸ್ವರಣಕಾಂತ್ ಶರ್ಮಾ ಡಿಸೆಂಬರ್ 16, 2025 ರೊಳಗೆ ₹40 ಲಕ್ಷ ಮತ್ತು ಈ ವರ್ಷದ ಜನವರಿ 15 ರೊಳಗೆ ಉಳಿದ ₹2.1 ಕೋಟಿ. ಹಣ ಪಾವತಿಸುವುದಾಗಿ ರಾಜ್ಪಾಲ್ ಯಾದವ್ ಹೇಳಿದ್ದರು ಆದರೆ ಇಲ್ಲಿಯವರೆಗೆ ಹಣ ಪಾವತಿಯಾಗಿಲ್ಲ ಎಂದು ಹೇಳಿದ್ದಾರೆ.
ಅಕ್ಟೋಬರ್ನಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಎರಡು ಡಿಮ್ಯಾಂಡ್ ಡ್ರಾಫ್ಟ್ಗಳನ್ನು ಜಮಾ ಮಾಡಲಾಗಿದ್ದರೂ, 9 ಕೋಟಿ ರೂಪಾಯಿ ಇನ್ನೂ ಬಾಕಿ ಇದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿರುವ ನ್ಯಾಯಾಧೀಶರು, ನ್ಯಾಯಾಲಯದ ಮುಂದೆ ನೀಡಲಾದ ಭರವಸೆಗಳನ್ನು ಪದೇ ಪದೇ ಉಲ್ಲಂಘಿಸಿದ, ಹಣವನ್ನು ಪಾವತಿ ಮಾಡದ ರಾಜ್ಪಾಲ್ ಯಾದವ್ ಉಲ್ಲಂಘನೆಯ ದೃಷ್ಟಿಯಿಂದ, ಜೈಲು ಅಧಿಕಾರಿಗಳ ಮುಂದೆ ನಾಳೆ (ಫೆಬ್ರವರಿ 4) ಸಂಜೆ 4 ಗಂಟೆಯೊಳಗೆ ಜೈಲು ಅಧೀಕ್ಷಕರ ಮುಂದೆ ಶರಣಾಗುವಂತೆ ಜಡ್ಜ್ ಸ್ವರಣ ಕಾಂತ್ ಶರ್ಮಾ ಆದೇಶಿಸಿದ್ದಾರೆ. ಫೆಬ್ರವರಿ 5ರಂದು ಮತ್ತೆ ವಿಚಾರಣೆಯನ್ನು ನಡೆಸುವುದಾಗಿ ಹೇಳಿದ್ದಾರೆ.