ಸಂಭಾಲ್ : ಪತಿಯನ್ನು ಹೊಡೆದು ಕೊಂದಿದ್ದು ಮಾತ್ರವಲ್ಲದೆ, ಮೃತದೇಹವನ್ನು ತುಂಡು ತುಂಡು ಮಾಡಿ ವುಡ್ ಗ್ರೈಂಡರ್‌ನಲ್ಲಿ ರುಬ್ಬಿ ಚರಂಡಿಗೆ ಎಸೆದಿರುವ ಘಟನೆ ಚಂದೌಸಿ ಪ್ರದೇಶದಲ್ಲಿ ನಡೆದಿದೆ.
ಆರೋಪದ ಮೇಲೆ ಆತನ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ರೂಬಿ ಮತ್ತು ಗೌರವ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಚಂದೌಸಿ ಪ್ರದೇಶದ ಮೊಹಲ್ಲಾ ಚುನ್ನಿ ನಿವಾಸಿ ರೂಬಿ ನವೆಂಬರ್ 18 ರಂದು ತನ್ನ ಪತಿ ರಾಹುಲ್ (38) ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು.ಇದಾದ ಸಾಕಷ್ಟು ದಿನಗಳ ನಂತರ ಅಂದರೆ ಡಿಸೆಂಬರ್ 15 ರಂದು ಈದ್ಗಾ ಪ್ರದೇಶದ ಬಳಿಯ ಚರಂಡಿಯಿಂದ ಪೊಲೀಸರು ವಿರೂಪಗೊಂಡ ಶವವನ್ನು ವಶಪಡಿಸಿಕೊಂಡಿದ್ದರು. ಆ ಶವದಲ್ಲಿ ತಲೆ, ಕೈಗಳು ಹಾಗೂ ಕಾಲುಗಳು ಇದ್ದಿರಲಿಲ್ಲ. ದೇಹದ ಮೇಲೆ ರಾಹುಲ್ ಎಂಬ ಹೆಸರು ಬರೆದಿತ್ತು. ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಧಿವಿಜ್ಞಾನ ತಂಡವು ವಿವರವಾದ ಪರೀಕ್ಷೆಯನ್ನು ನಡೆಸಿತು.
ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ವರದಿಗಳನ್ನು ಪರಿಶೀಲಿಸಿದಾಗ ಮತ್ತು ತಾಂತ್ರಿಕ ವಿಶ್ಲೇಷಣೆಯಲ್ಲಿ ರಾಹುಲ್ ಅವರ ಮೊಬೈಲ್ ಫೋನ್ ನವೆಂಬರ್ 18 ರಿಂದ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ.
ಹೆಚ್ಚಿನ ತನಿಖೆಯ ನಂತರ ಪೊಲೀಸರು ರೂಬಿಯ ಕೈವಾಡವನ್ನು ಶಂಕೆ ಮಾಡಿದ್ದರು. ವಿಚಾರಣೆಯ ಸಮಯದಲ್ಲಿ, ರೂಬಿ ಹಾಗೂ ಗೌರವ್ ನಡುವಿನ ಅಕ್ರಮ ಸಂಬಂಧವನ್ನು ರಾಹುಲ್ ರೆಡ್‌ಹ್ಯಾಂಡ್ ಆಗಿ ನೋಡಿದದ. ಆ ಬಳಿಕ ತನ್ನ ಪ್ರಿಯಕರ ಗೌರವ್‌ನ ಸಹಾಯದಿಂದ ರಾಹುಲ್‌ನನ್ನು ಕೊಂದಿದ್ದಾಗಿ ರೂಬಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.