Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ನಾಯಕರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರು ಬೆಂಗಳೂರಿನ ಖಾಸಗಿ ಅತಿಥಿ ಗೃಹದಲ್ಲಿ ಶನಿವಾರ ರಾತ್ರಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಭೇಟಿ ಇದೀಗ ಪವರ್ ಫೈಟ್ ಚರ್ಚೆಗೆ ಇನ್ನಷ್ಟು ತಿರುವು ನೀಡಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಅಹಿಂದ ನಾಯಕ ಕೆ.ಎನ್.ರಾಜಣ್ಣರನ್ನು ಭೇಟಿಯಾಗಿರುವುದು ಹಲವು ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ. ಡಿಸಿಎಂ ಡಿಕೆಶಿ ವಿರುದ್ಧ ಬಹಿರಂಗವಾಗಿನೇ ಹೇಳಿಕೆಗಳನ್ನು ನೀಡುತ್ತಿದ್ದ ಕೆ.ಎನ್.ರಾಜಣ್ಣ ಶನಿವಾರ ಹಠಾತ್ ಆಗಿ ಭೇಟಿಯಾಗಿರುವುದು ಹಲವು ಲೆಕ್ಕಾಚಾರಗಳನ್ನು ಹುಟ್ಟು ಹಾಕಿದೆ.
ಉಭಯ ನಾಯಕರ ಮಧ್ಯೆ ತೀವ್ರ ತಿಕ್ಕಾಟ ಇರುವ ಮಧ್ಯೆ ಶನಿವಾರ ರಾತ್ರಿ ಪರಸ್ಪರ ಭೇಟಿಯಾಗಿ ಸಮಾಲೋಚನೆ ನಡೆಸಿರುವುದು ಅಚ್ಚರಿ ಮೂಡಿಸಿದೆ. ಉಭಯ ನಾಯಕರು ಸದ್ಯದ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ನಾಯಕತ್ವ ಬದಲಾವಣೆಗೆ ಹೈ ಕಮಾಂಡ್ ಒಪ್ಪಿದರೆ ತಮ್ಮನ್ನು ಬೆಂಬಲಿಸುವಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.