Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಾಸನ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 80 ವರ್ಷ ವಯಸ್ಸಿನ ಪಾರ್ವತಮ್ಮ ವೃದ್ಧಾಶ್ರಮದಲ್ಲಿ ಭಾನುವಾರ ಮೃತಪಟ್ಟರು.
ಬದುಕಿದ್ದಾಗ ತಾಯಿಗೆ ಊಟ ಹಾಕದೆ ವೃದ್ಧಾಶ್ರಮದಲ್ಲಿ ಬಿಟ್ಟಿದ್ದ ಆರು ಮಕ್ಕಳು ಯಾವಾಗ ತಾಯಿ ಮೃತಪಟ್ಟಳು ಅನ್ನೋದು ಗೊತ್ತಾಯ್ತೋ ಎಲ್ಲರೂ ಓಡೋಡಿ ಬಂದಿದ್ದಾರೆ. ಮೃತದೇಹ ನಮಗೆ ಬೇಕು, ನಮಗೆ ಬೇಕು ಎಂದು ಕಿತ್ತಾಟ ಶುರು ಮಾಡಿದ್ದಾರೆ.
ಆರು ಮಕ್ಕಳಿದ್ರೂ ಒಬ್ಬರೇ ಒಬ್ರೂ ತುತ್ತು ಅನ್ನ ಹಾಕಿರ್ಲಿಲ್ಲ. ಹೆತ್ತವಳನ್ನು ಕೊನೇಗಾಲದಲ್ಲಿ ಸಾಕುವುದಕ್ಕೆ ಆಗಲ್ಲ ಎಂದು ಬೀದಿಯಲ್ಲಿ ಬಿಟ್ಟಿದ್ದರು.
ವೃದ್ಧಾಶ್ರಮದಲ್ಲಿದ್ದ ಹಿರಿಯ ಜೀವ ಮಕ್ಕಳ ನೆನಪಲ್ಲೇ ನರಳಿ ನರಳಿ ಪ್ರಾಣ ಬಿಟ್ಟಿದೆ. ಯಾವಾಗ ಹೆತ್ತವಳು ಮೃತಪಟ್ಟಳು ಅನ್ನೋದು ಗೊತ್ತಾಯ್ತೋ, ಮಕ್ಕಳ ಹೈಡ್ರಾಮಾ ಶುರುವಾಗಿದೆ.. ಒಂದು ತುತ್ತು ಅನ್ನ ಹಾಕದವ್ರು, ಮೃತ ದೇಹಕ್ಕಾಗಿ ಬಡಿದಾಡಿಕೊಂಡಿದ್ದಾರೆ.
ಹಾಸನ ತಾಲ್ಲೂಕಿನ ಕವಳಿಕೆರೆ ಗ್ರಾಮದ ಪಾರ್ವತಮ್ಮ ಅವರಿಗೆ ಒಟ್ಟು ಆರು ಮಕ್ಕಳು. ಮೂರು ಗಂಡು, ಮೂರು ಹೆಣ್ಣು. ತಾಯಿಗೆ ವಯಸ್ಸಾಗ್ತಿದ್ದಂತೆ ಹೆತ್ತವಳು ಯಾರಿಗೂ ಬೇಡವಾಗಿದ್ಲು.. ನೋಡ್ಕೊಳ್ಳೋದಕ್ಕೆ ಆಗಲ್ಲ ಅಂತಾ ಬೀದಿಗೆ ತಳ್ಳಿದ್ರು. ಹೀಗಾಗಿ ದಿಕ್ಕು ಕಾಣದಂತಾದ ಪಾರ್ವತಮ್ಮ ಚನ್ನರಾಯಪಟ್ಟಣದ ಮಾತೃಭೂಮಿ ವೃದ್ಧಾಶ್ರಮ ಸೇರಿಕೊಂಡಿದ್ದರು.
ಕಳೆದೊಂದು ತಿಂಗಳಿಂದ ವೃದ್ಧಾಶ್ರಮದಲ್ಲೇ ಒಂದು ತುತ್ತು ಅನ್ನ ತಿಂತಿದ್ದರು. ತಾಯಿ ಹೆಸರಲ್ಲಿರುವ ಆಸ್ತಿಗೋ ಅಥವಾ ಹೆತ್ತವಳ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣಕ್ಕೋ ಗೊತ್ತಿಲ್ಲ. ಇದ್ದಾಗ ಕಣ್ಣೆತ್ತಿ ನೋಡದ ಮಕ್ಕಳು ಈಗ ಓಡೋಡಿ ಬಂದಿದ್ದಾರೆ.
ಪಾರ್ವತಮ್ಮನವರ ಮಕ್ಕಳಾದ ಮಂಜೇಗೌಡ, ರಾಮಸ್ವಾಮಿ, ಜಯಮ್ಮ, ಭಾಗ್ಯ ಮತ್ತು ಇಂದ್ರ ಎಂಬುವರು ಮಾತೃಭೂಮಿ ವೃದ್ಧಾಶ್ರಮದಲ್ಲಿ ಹೈಡ್ರಾಮಾವನ್ನೇ ಮಾಡಿದ್ರು. ಇವರ ಹೈಡ್ರಾಮಾ ನೋಡಿದ ಜನರೇ ಕಂಗಾಲಾಗಿ ಹೋಗಿದ್ರು.
ಯಾವಾಗ ವೃದ್ಧಾಶ್ರಮದ ಮಾಲೀಕರು ಸಿಡಿದೆದ್ರೋ ಎಲ್ಲರೂ ಸೈಲೆಂಟ್ ಆಗಿದ್ದಾರೆ. ನಿಮಗ್ಯಾರಿಗೂ ಮೃತದೇಹ ಕೊಡಲ್ಲ. ನಾವೇ ಅಂತ್ಯಸಂಸ್ಕಾರ ಮಾಡ್ತೇವೆ ಎಂದು ಬಿಸಿ ಮುಟ್ಟಿಸ್ತಿದ್ದಂತೆ ಮೆತ್ತಗಾಗಿದ್ದಾರೆ. ಕೊನೆಗೆ ಎಲ್ಲರೂ ಸೇರ್ಕೊಂಡು ಮೃತದೇಹ ತೆಗೆದುಕೊಂಡು ಹೋಗಿದ್ದಾರೆ.