newsics.com
ನವದೆಹಲಿ: ಮತಗಳ್ಳತನ ಆರೋಪ ಮಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಚುನಾವಣಾ ಆಯೋಗವು ಇಂದು ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ನಿಮ್ಮ ಹೇಳಿಕೆಯನ್ನು ಬೆಂಬಲಿಸಲು ಘೋಷಣೆಗೆ ಸಹಿ ಹಾಕಿ ಅಥವಾ “ನಕಲಿ” ಆರೋಪಗಳನ್ನು ಮಾಡಿದ್ದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಿ ಎಂದು ಸೂಚಿಸಿದ್ದಾರೆ.
ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ನಡೆದ ಮತ ಕಳ್ಳತನದ ಆರೋಪದ ಬಗ್ಗೆ ರಾಹುಲ್ ಗಾಂಧಿ ಮತ್ತು ಚುನಾವಣಾ ಆಯೋಗ ವಾಗ್ವಾದ ನಡೆದ ಒಂದು ದಿನದ ನಂತರ ಚುನಾವಣಾ ಪ್ರಾಧಿಕಾರದ ಅಧಿಕಾರಿಗಳು ಮತ್ತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಹಿ ಮಾಡಿದ ಘೋಷಣೆಯನ್ನು ನೀಡುವ ಮೂಲಕ ಅವರ ಆರೋಪವನ್ನು ದೃಢೀಕರಿಸಲು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ನಿಯಮಗಳ ಪ್ರಕಾರ ಘೋಷಣೆ ಮಾಡಬೇಕು ಅಥವಾ ತಮ್ಮ ಸುಳ್ಳು ಆರೋಪಗಳಿಗೆ ದೇಶಕ್ಕೆ ಕ್ಷಮೆಯಾಚಿಸಬೇಕು” ಎಂದು ಚುನಾವಣಾ ಆಯೋಗ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಆಗಸ್ಟ್ 7ರಂದು ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯ ನಂತರ ಹಲವು ಬೆಳವಣಿಗೆಗಳು ನಡೆದವು. ರಾಹುಲ್ ಅವರು 2024ರ ಲೋಕಸಭಾ ಚುನಾವಣೆಯನ್ನು ಬಿಜೆಪಿಗೆ ಲಾಭವಾಗುವಂತೆ ಚುನಾವಣಾ ಆಯೋಗವು ಅಕ್ರಮ ಮತದಾನಕ್ಕೆ ಸಹಾಯ ಮಾಡಿದೆ ಎಂದು ಆರೋಪಿಸಿದ್ದರು. ಅದಕ್ಕೆ ಬೇಕಾದ ಕೆಲವು ದಾಖಲೆಗಳನ್ನೂ ನೀಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ, ಆ ಸಾಕ್ಷಿಗಳು ಸಾಕಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು.
ರಾಹುಲ್ ಗಾಂಧಿ ತಮ್ಮ ಪಕ್ಷದ ವಿಶ್ಲೇಷಣೆಯನ್ನು ನಂಬಿದರೆ ಮತ್ತು ಇಸಿಐ ವಿರುದ್ಧದ ಅವರ ಆರೋಪಗಳು ನಿಜವೆಂದು ನಂಬಿದರೆ ಡಿಕ್ಲರೇಷನ್ಗೆ ಸಹಿ ಹಾಕಬೇಕು. ಅಫಿಡವಿಟ್‌ಗಳಿಗೆ ಸಹಿ ಹಾಕದಿದ್ದರೆ ಅವರು ದೇಶದ ಕ್ಷಮೆಯಾಚಿಸಬೇಕು” ಎಂದು ಇಸಿಐ ರಾಹುಲ್ ಗಾಂಧಿಗೆ ಸೂಚಿಸಿದೆ.