newsics.com
ಶ್ರಾವಣ ಮಾಸದಲ್ಲಿ ಬರುವ ಹೆಂಗಳೆಯರ ನೆಚ್ಚಿನ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ದೇವತೆ ಲಕ್ಷ್ಮಿ ದೇವಿಯನ್ನು ಆರಾಧಿಸುವ ವರಮಹಾಲಕ್ಷ್ಮಿ ಹಬ್ಬ ಈ ವರ್ಷ ಆಗಸ್ಟ್ 8 ಅಂದರೆ ನಾಳೆ ಬರಲಿದೆ.ಈ ಮಂಗಳಕರ ದಿನದಂದು ವಿಶೇಷ ಆಚರಣೆಗಳನ್ನು ಮಾಡುವ ಮೂಲಕ ಲಕ್ಷ್ಮಿ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಮಹಾಲಕ್ಷ್ಮೀಯ ಜನನ:
ಮುನಿಗಳಲ್ಲಿ ಅತ್ಯಂತ ಕೋಪಿಷ್ಟರೆಂದೇ ಖ್ಯಾತರಾದ ದುರ್ವಾಸ ಮಹರ್ಷಿಗಳ ಶಾಪದಿಂದಾಗಿ ದೇವೇಂದ್ರನು ರಾಜ್ಯಭ್ರಷ್ಟನಾದಾಗ, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿಕೊಂಡಾಗ ದೇವಲೋಕಕ್ಕೆ ದಾರಿದ್ರ ಕಾಡತೊಡಗುತ್ತದೆ. ಇದರಿಂದ. ದುಃಖ ತಪ್ತರಾದ ದೇವತೆಗಳೆಲ್ಲರೂ ಚತುರ್ಮುಖ ಬ್ರಹ್ಮನನ್ನು ಮುಂದಿಟ್ಟುಕೊಂಡು, ವೈಕುಂಠವಾಸಿ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ.
ಭಗವಾನ್ ವಿಷ್ಣುವಿನ ಆಜ್ಞೆಯಂತೆ ಅಮೃತವನ್ನು ಪಡೆಯಲು ಸಮುದ್ರ ಮಂಥನ ಮಾಡಲು ರಾಕ್ಷಸರು ಹಾಗೂ ದೇವತೆಗಳು ಮಂದಾರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು ವಾಸುಕಿಯ ಸಹಾಯದೊಂದಿಗೆ ಸಮುದ್ರವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಮಹೇಂದ್ರನ ಸಂಪತ್ಸ್ವರೂಪಿಣಿಯಾದ ಮಹಾಲಕ್ಷ್ಮಿಯ ಜನನವಾಗಿ, ದೇವತೆಗಳನ್ನು ಅನುಗ್ರಹಿಸಿದ್ದಲ್ಲದೇ, ಮಹಾವಿಷ್ಣುವನ್ಬು ವರಿಸುತ್ತಾಳೆ.
ಸಮುದ್ರ ಮಂಥನದಲ್ಲಿ ಹುಟ್ಟಿದ ವರಮಹಾಲಕ್ಷ್ಮಿಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಕಮಲದಲ್ಲಿ ಆವಿರ್ಭವಿಸಿದವಳು ಎಂದೂ ಕರೆಯಲಾಗುತ್ತದೆ
ಲಕ್ಷ್ಮೀ ವ್ರತ ಆಚರಣೆ ಹೇಗೆ?
ಶುದ್ಧತೆಯ ಸಂಕೇತವೇ ಲಕ್ಷ್ಮೀ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ಅಂಗಳದಲ್ಲಿ ರಂಗೋಲಿ ಹಾಕಿ ಬಾಗಿಲಿಗೆ ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ತಾಮ್ರದ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ಒಣ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದಲ್ಲಿ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆಗೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ. ಹೀಗೆ ಶುಕ್ರವಾರ ವರಮಹಾಲಕ್ಷ್ಮಿಯನ್ನು ಬ್ರಾಹ್ಮೀ (ಮುಂಜಾನೆ 4:30 ರಿಂದ 5.30) ಮುಹೂರ್ತದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಬೇಕು. ಈ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ನಮ್ಮ ಪ್ರಾರ್ಥನೆ ದೇವಿಗೆ ತಲುಪಿ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆಯಿದೆ.
https://www.newsics.com/2025/08/07/grihalakshmi-money-for-varamahalakshmi-festival/