newsics.com
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಪ್ರಯಾಣಿಸಿದ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟ್ ಅನ್ನು ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಿಳೆ ಲತಾ ಅವರನ್ನು ಸನ್ಮಾನಿಸಿದರು.
ಈ ವೇಳೆ ಬಸ್‌ನಲ್ಲಿದ್ದ ಮಹಿಳೆಯರಿಗೆ ಇಳಕಲ್ ಸೀರೆ, ಸಿಹಿ ವಿತರಣೆ ಮಾಡಲಾಯಿತು. ಇದೇ ವೇಳೆ ಶಕ್ತಿ ಯೋಜನೇಯ ಫಲಾನುಭವಿಯೊಬ್ಬರು ಮುಖ್ಯಮಂತ್ರಿ ಮತ್ತು ಸಚಿವರಿಗೆ ಖಡಕ್ ರೊಟ್ಟಿ, ಶೇಂಗಾ ಹೋಳಿಗೆ ನೀಡಿ ಹಾರೈಸಿದರು.
ಟಿಕೆಟ್ ವಿತರಿಸಿದ ನಂತರ ಮಾತನಾಡಿದ ಅವರು, ನಾಡಿನ ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವತಂತ್ರ ನಿರ್ಣಯ ಕೈಗೊಂಡು ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಗ್ಗೆ ಹೆಮ್ಮೆಯಿದೆ. ಶಕ್ತಿ ರಾಜ್ಯದ ಲಕ್ಷಾಂತರ ಮಹಿಳೆಯರ ಕನಸುಗಳನ್ನು ನನಸಾಗಿಸಿ, ನಿಜಾರ್ಥದಲ್ಲಿ ಅವರ ಬದುಕಿಗೆ ಶಕ್ತಿ ತುಂಬಿದೆ ಎಂದು ಹೇಳಿದರು.
5 ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಮೊದಲ ಗ್ಯಾರಂಟಿ ಯೋಜನೆಯಾಗಿದ್ದು, ಈ ಯೋಜನೆಗೆ 2023ರ ಜೂ.11ರಂದು ಚಾಲನೆ ನೀಡಲಾಗಿತ್ತು.