newsics.com
ರಾಯಚೂರು: ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ನಾನಕ್ಕೆಂದು ತುಂಗಭದ್ರಾ ನದಿಗೆ ಇಳಿದ ಮೂವರು ಯುವಕರು ನೀರಿನ ಸೆಳತಕ್ಕೆ ಸಿಲುಕಿ ನೀರಲ್ಲಿ ಮುಳುಗಿದ ಘಟನೆ ಶನಿವಾರ ಸಂಜೆ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಸಮೀಪದ ತುಂಗಭದ್ರಾ ನದಿಯಲ್ಲಿ ಜರುಗಿದೆ.
ನೀರುಪಾಲಾದ ಯುವಕರನ್ನು ಹಾಸನ ಮೂಲದ ಅಜಿತ್(೨೦), ಸಚಿನ(೨೦) ಹಾಗೂ ಪ್ರಮೋದ(೧೯) ಎಂದು ಗುರುತಿಸಲಾಗಿದೆ. ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಹಾಸನದಿಂದ ೭ ಸ್ನೇಹಿತರು ಆಗಮಿಸಿದ್ದರು. ಇವರಲ್ಲಿ ಕಾಣೆಯಾಗಿರುವ ಮೂವರು ಸ್ನಾನಘಟ್ಟದ ಬಳಿ ತುಂಬಿ ಹರಿಯುತ್ತಿರುವ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾರೆ.
ಪ್ರಸಕ್ತ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಯಲ್ಲಿನ ನೀರಿನ ಹರಿವು, ಸೆಳವು ಅಧಿಕವಾಗಿರುವ ಹಿನ್ನೆಲೆಯಲ್ಲಿ ಮೂವರು ನದಿಯಲ್ಲಿ ಕಣ್ಮರೆಯಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಹಾಗೂ ಈಜುಗಾರರ ತಂಡ ಶನಿವಾರ ರಾತ್ರಿಯವರೆಗೂ ಯುವಕರ ಶೋಧಕಾರ್ಯ ನಡೆಸಿದ್ದರು.
ರಾತ್ರಿಯವರೆಗೂ ಶೋಧ ಕಾರ್ಯಾಚರಣೆ ನಡೆಸಿದರೂ ಮೂವರ ದೇಹಗಳು ದೊರೆಯದ ಕಾರಣಕ್ಕೆ ನಿನ್ನೆ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿದ್ದರು. ಮೂವರು ಯುವಕರ ಪಾಲಕರನ್ನು ಕರೆಸಿಕೊಳ್ಳಲಾಗಿದೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.