newsics.com
8 ವರ್ಷದ ಬಾಲಕಿ ಸುಮಾರು ಒಂದು ತಿಂಗಳಿಂದ ಜೀವಂತ ಹುಳುಗಳನ್ನು ವಾಂತಿ ಮಾಡುತ್ತಿರುವ ಘಟನೆ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್ಝೌ ನಗರದಲ್ಲಿ ನಡೆದಿದೆ.
ಈ ಬಗ್ಗೆ ಆಕೆಯ ಮನೆಯವರು ಕೂಡ ಅಚ್ಚರಿಕೆಗೊಂಡಿದ್ದಾರೆ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.ಈ ಹುಡುಗಿ ಪ್ರತಿ ಬಾರಿಯೂ “ಒಂದು ಸೆಂಟಿಮೀಟರ್ ಉದ್ದದ ಒಂದು ಕೈಬೆರಳೆಣಿಕೆಯಷ್ಟು ಹುಳುಗಳನ್ನು ವಾಂತಿ ಮಾಡುತ್ತಿದ್ದಾಳೆ” ಎಂದು ಆಕೆಯ ತಂದೆ ವಿವರಿಸಿದ್ದಾರೆ. ನನ್ನ ಮಗಳು ಪದೇ ಪದೇ ವಾಂತಿ ಮಾಡುತ್ತಿದ್ದಳು, ಸ್ಥಳೀಯ ವೈದ್ಯರ ಬಳಿ ಹೋಗಿ ತೋರಿಸಿದ್ದೇವೆ. ಆದರೆ ಅವರಿಗೆ ಇದು ಯಾವ ಕಾಯಿಲೆಯೆಂದು ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ಅವರು ಕೂಡ ಗೊಂದಲಗೊಂಡಿದ್ದರು ಎಂದು ಆಕೆಯ ತಂದೆ ಹೇಳಿದ್ದಾರೆ. ಕೊನೆಗೆ ಜಿಯಾಂಗ್ಸುವಿನ ಸೂಚೋ ವಿಶ್ವವಿದ್ಯಾಲಯದ ಮಕ್ಕಳ ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ನಂತರವೇ ಮಕ್ಕಳ ತಜ್ಞ ಡಾ. ಜಾಂಗ್ ಬಿಂಗ್‌ಬಿಂಗ್ ಈ ಬಗ್ಗೆ ಅಘಾತಕಾರಿ ಮಾಹಿತಿಯೊಂದನ್ನು ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾದರಿ ತೆಗೆದುಕೊಂಡು ಸಂಶೋಧನೆ ನಡೆಸಿದ ಸಿಡಿಸಿ ಕೇಂದ್ರ, ಇದು ಮಾತ್ ಫ್ಲೈ ಎಂದೂ ಕರೆಯಲ್ಪಡುವ ಡ್ರೈನ್ ಫ್ಲೈನ ಲಾರ್ವಾ ರೋಗ ಎಂದು ಪತ್ತೆ ಮಾಡಿದೆ. ಈ ಕೀಟಗಳು ಹೆಚ್ಚಾಗಿ ಮನೆಯ ಚರಂಡಿಗಳು, ಸ್ನಾನಗೃಹಗಳು ಮತ್ತು ಅಡುಗೆಮನೆಗಳಂತಹ ತೇವ, ಕತ್ತಲೆಯಾದ ಸ್ಥಳಗಳಲ್ಲಿ ಕಂಡುಬರುತ್ತವೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಚೀನಾದ ದಕ್ಷಿಣ ಪ್ರದೇಶಗಳಲ್ಲಿ ಇವುಗಳು ಕಂಡು ಬರುತ್ತದೆ.
ಕಲುಷಿತ ನೀರಿನ ಮೂಲಕ ಹುಳುಗಳು ಹುಡುಗಿಯ ದೇಹವನ್ನು ಪ್ರವೇಶಿಸಿರಬಹುದು. ಈ ಬಾಲಕಿ ಹಲ್ಲುಜ್ಜಿದಾಗ ಅಥವಾ ಶೌಚಾಲಯವನ್ನು ಫ್ಲಶ್ ಮಾಡಿದಾಗ, ನೀರಿನ ಸಿಂಪಡಣೆಯ ಮೂಲಕ ಹುಳುಗಳು ಅವಳ ದೇಹವನ್ನು ಪ್ರವೇಶಿಸಬಹುದು ಎಂದು ಯಾಂಗ್ಝೌ ಸಿಡಿಸಿಯ ವಿಭಾಗದ ಮುಖ್ಯಸ್ಥರಾದ ಕ್ಸು ಯುಹುಯಿ ಹೇಳಿದ್ದಾರೆ.