newsics.com
ಉತ್ತರ ಪ್ರದೇಶ: ಶಿಕ್ಷಕರು ಎಂದರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ಇವರಂತೆ ನಾನೂ ಕೂಡ ಆಗ್ಬೇಕು ಅಂತ ಅನಿಸುವ ಹಾಗಿರಬೇಕು. ಶಿಕ್ಷಕರು ಯಾವಾಗಲೂ ವಿದ್ಯಾರ್ಥಿಗಳ ಜೀವನ ರೂಪಿಸುವ ಶಕ್ತಿಯಾಗಿರಬೇಕು. ಬದಲಾಗಿ ವಿದ್ಯಾರ್ಥಿಗಳ ಹಾದಿ ತಪ್ಪಿಸಿ ಅವರ ಭವಿಷ್ಯವನ್ನು ಹಾಳು ಮಾಡುವಂತಿರಬಾರದು. ಆದರೆ ಇಲ್ಲಿ ನಡೆದ ಒಂದು ಘಟನೆ ನೋಡಿದರೆ ಇಂಥಾಶಿಕ್ಷಕರೂ ಇರ್ತಾರಾ ಅನಿಸಿಬಿಡುತ್ತದೆ.
ಇಬ್ಬರು ಶಿಕ್ಷಕರು ತರಗತಿಯ ಕೋಣೆಯೊಳಗೆ ಮದ್ಯ ಸೇವಿಸಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಬ್ಲಾಕ್‌ನ ಫಯ್ಯಾಜ್‌ನಗರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ್ ಕುಮಾರ್ ಮತ್ತು ಹತ್ತಿರದ ಸುತಾರಿ ಗ್ರಾಮದ ಶಾಲೆಯ ಮತ್ತೊಬ್ಬ ಮುಖ್ಯೋಪಾಧ್ಯಾಯ ಅನುಪಾಲ್ ಅವರು ಪ್ರತಿದಿನ ಮಕ್ಕಳ ಎದುರಿನಲ್ಲೇ ಶಾಲಾ ಆವರಣದಲ್ಲಿ ಒಟ್ಟಾಗಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.
ಶಿಕ್ಷಕರಿಬ್ಬರು ತರಗತಿಯ ಕೋಣೆಯೊಳಗೆ ಕುಡಿಯುತ್ತಿರುವುದನ್ನು ಗ್ರಾಮಸ್ಥರು ವಿಡಿಯೋ ಚಿತ್ರೀಕರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಇಬ್ಬರು ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ತರಗತಿಯ ಕೋಣೆಯಲ್ಲಿ ಮೇಜಿನ ಮೇಲೆ ಮದ್ಯ ಸುರಿದುಕೊಂಡು ಸೇವಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.