newsics.com
ಇಂದೋರ್(ಮಧ್ಯಪ್ರದೇಶ): ಮದುವೆಗಳಲ್ಲಿ ಕುದುರೆಗಳನ್ನ ಕುಣಿಸೋದನ್ನು ಕಂಡಿದ್ದೇವೆ. ಆದರೆ ಈಗ ಕುದುರೆಗಳನ್ನೇ ಒಂಟೆಗಳು ಮೀರಿಸಿವೆ. ಒಂಟೆಗಳು ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುವುದನ್ನು ಕಲಿತಿದ್ದು, ಇವುಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ.
ಒಂಟೆ ನೃತ್ಯಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮಧ್ಯಪ್ರದೇಶದಲ್ಲಿ ಒಂಟೆಗಳಿಗೆ ವಿವಿಧ ರೀತಿಯ ತರಬೇತಿ ನೀಡುತ್ತಿದ್ದು, ನೃತ್ಯ ಕಲಿಸಲಾಗುತ್ತಿದೆ. ಸದ್ಯ ನೃತ್ಯ ಮಾಡುವ ಇಂತಹ ಒಂಟೆಗಳ ಬೆಲೆ 50 ಸಾವಿರ ರೂ.ಗಳಿಂದ 7 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.

ಮರುಭೂಮಿಯ ಹಡಗುಗಳು ಎಂದೇ ಕರೆಯಲ್ಪಡುವ ಒಂಟೆಗಳು ಶತಮಾನಗಳಿಂದ ಕಠಿಣ ಮರುಭೂಮಿಯಲ್ಲಿ ಸಾರಿಗೆಗೆ ಇರುವ ಏಕೈಕ ಸಾಧನಗಳಾಗಿವೆ. ಆದರೆ ಈಗ ವಿವಿಧ ರೀತಿಯ ವಾಹನಗಳನ್ನು ಬಳಸಲಾಗುತ್ತಿದೆ. ಹೀಗೆ ಮರುಭೂಮಿಯಲ್ಲಿ ಪ್ರಯಾಣಿಸಲು ಇತರ ವಿಧಾನಗಳ ಅಭಿವೃದ್ಧಿಯಿಂದಾಗಿ ಒಂಟೆಗಳ ಬಳಕೆ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಈಗ ಒಂಟೆಗಳನ್ನು ವಿವಿಧ ಕೆಲಸಗಳಲ್ಲಿ ಬಳಸಲು ತರಬೇತಿ ನೀಡಲಾಗುತ್ತಿದೆ.
ಮಧ್ಯಪ್ರದೇಶದಲ್ಲಷ್ಟೇ ಅಲ್ಲದೇ ದೇಶದ ಇತರ ರಾಜ್ಯಗಳಲ್ಲಿಯೂ ನೃತ್ಯ ಮಾಡುವ ಒಂಟೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಒಂಟೆಗಳಿಗೂ ವಿವಿಧ ರೀತಿಯ ನೃತ್ಯಗಳನ್ನು ಕಲಿಸಲಾಗುತ್ತಿದೆ.
ಇಂದೋರ್‌ನ ಮಹೌ ಮತ್ತು ದೇವಾಸ್‌ನ ರಸೂಲ್‌ಪುರ ಬೈಪಾಸ್ನಲ್ಲಿರುವ ಒಂದೇ ಸ್ಥಳದಲ್ಲಿ ಅನೇಕ ಒಂಟೆಗಳಿಗೆ ವಿವಿಧ ರೀತಿಯ ನೃತ್ಯಗಳನ್ನು ಕಲಿಸಲಾಗುತ್ತಿದೆ.
ಶೇರ್ ಪಟಾಕ್ ನೃತ್ಯ (ಸಿಂಹದಂತೆ ಎರಡು ಕಾಲುಗಳನ್ನು ಮುಂದಕ್ಕೆ ಇರಿಸಿ ಕುಳಿತುಕೊಳ್ಳುವುದು).
ನಾಚ್ ಕೆ ಪರ್ ನೃತ್ಯ (ಪಾದಗಳಿಗೆ ಗೆಜ್ಜೆಗಳನ್ನು ಕಟ್ಟಿ ಮುಂಭಾಗದ ಕಾಲುಗಳಿಂದ ನೃತ್ಯ ಮಾಡುವುದು).
ಚೌತಾಲಾ ನೃತ್ಯ (ನಾಲ್ಕು ಕಾಲುಗಳನ್ನು ಒಟ್ಟಿಗೆ ಸೇರಿಸಿ ನೃತ್ಯ ಮಾಡುವುದು).
ಜಂಪಿಂಗ್ ನೃತ್ಯ (ಕುದುರೆಯಂತೆ ಮುಂಭಾಗದ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ಎರಡು ಕಾಲುಗಳ ಮೇಲೆ ನಿಂತು ನೃತ್ಯ ಮಾಡುವುದು).
ನೀಚಿ ನಾರ್ (ಕುತ್ತಿಗೆಯನ್ನು ಕೆಳಗೆ ಇರಿಸಿ ನೃತ್ಯ ಮಾಡುವುದು) ಪ್ರಮುಖವಾದವುಗಳಾಗಿವೆ.
ಒಂಟೆಯ ನೃತ್ಯ ತರಬೇತುದಾರ ಫಿರೋಜ್ ಅಲಿ ಪ್ರಕಾರ ‘ಒಂಟೆಗಳಿಗೆ ಬಾಲ್ಯದಿಂದಲೇ ನೃತ್ಯ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ 2 ರಿಂದ 4 ವರ್ಷ ವಯಸ್ಸಿನ ಒಂಟೆಗಳು ಬೇಗನೆ ನೃತ್ಯ ಕಲಿಯುತ್ತವೆ. ನೃತ್ಯವನ್ನು ಕಲಿಯಲು, ಮೂಗಿನಲ್ಲಿ ಕಡಿವಾಣ ಹಾಕುವ ಮೂಲಕ ಕುದುರೆಗಳಂತೆ ಅವುಗಳನ್ನು ನಿಯಂತ್ರಿಸಿದ ನಂತರ, ಹಗ್ಗದ ಸನ್ನೆಗಳ ಸಹಾಯದಿಂದ ವಿವಿಧ ಹಂತಗಳನ್ನು ಕಲಿಸಲಾಗುತ್ತದೆ.
ರಾಜಸ್ಥಾನದಿಂದ ಒಂಟೆಗಳನ್ನು ಈಗ ಖರೀದಿಸಿ ಮಧ್ಯಪ್ರದೇಶ ಮತ್ತು ಇತರ ಸ್ಥಳಗಳಿಗೆ ಕರೆದೊಯ್ಯಲು ಇದೇ ಕಾರಣ ಎನ್ನಲಾಗಿದೆ.
ಮತ್ತೋರ್ವ ಒಂಟೆ ತರಬೇತುದಾರ ಪಪ್ಪು ಖಾನ್ ಪ್ರಕಾರ, ಮದುವೆ ಪ್ಯಾಕೇಜ್‌ಗಳಲ್ಲಿ ಒಂಟೆಗಳನ್ನು ಸಹ ಬುಕ್ ಮಾಡಲಾಗುತ್ತದೆ. ಇದರಲ್ಲಿ ಪ್ರತಿ ಒಂಟೆಯ ಬುಕಿಂಗ್ ₹8000 ರಿಂದ ₹15,000 ವರೆಗೆ ಇರುತ್ತದೆ. ರಾಜಸ್ಥಾನ ಮತ್ತು ಮರುಭೂಮಿ ಪ್ರದೇಶಗಳಲ್ಲಿ ಸಾಮಾನ್ಯ ಒಂಟೆಯ ಬೆಲೆ ₹50,000 ಆಗಿದ್ದರೆ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ನೃತ್ಯ ಮಾಡುವ ಒಂಟೆಯ ಬೆಲೆ ₹5 ರಿಂದ 7 ಲಕ್ಷದವರೆಗೆ ಇರುತ್ತದೆ ಎಂದರು.
Video viral ಮೆಟ್ರೋದಲ್ಲಿ ಯುವತಿಗೆ ಬಾಡಿ ಶೇಮಿಂಗ್: ಆಗಿದ್ದೇನು? ವಿಡಿಯೋ ನೋಡಿ
Relationship Tips ದೈಹಿಕ ಸಂಪರ್ಕಕ್ಕೂ ಮೊದಲು ಇವುಗಳನ್ನು ತಿನ್ನದಿರಿ…