newsics.com
ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭಾರತೀಯ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ 5000ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ್ದರು. ಇತ್ತೀಚೆಗಷ್ಟೇ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟ್ರಂಪ್ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು.
ಈ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು, ಇದೀಗ ಅದರ ಎರಡನೇ ಭಾಗದ ಕಾರ್ಯಾಚರಣೆ ನಡೆಯುತ್ತಿದೆ.
ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಭಾರತಕ್ಕೆ ಹೊರಟಿದೆ. ಸಿ -17 ವಿಮಾನವು ವಲಸಿಗರೊಂದಿಗೆ ಭಾರತಕ್ಕೆ ಹೊರಟಿತ್ತು ಆದರೆ ಕನಿಷ್ಠ 24 ಗಂಟೆಗಳಾದರೂ ಅದು ತಲುಪಲಿಲ್ಲ ಎಂದು ಹೇಳಿದರು. ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದರು. ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಅಮೆರಿಕಾ ಸಂಯುಕ್ತ ಸಂಸ್ಥಾನವು ಭಾರತೀಯ ವಲಸಿಗರನ್ನು ಮರಳಿ ಭಾರತಕ್ಕೆ ಗಡಿಪಾರು ಮಾಡಲು ಪ್ರಾರಂಭಿಸಿದೆ ಎನ್ನಲಾಗುತ್ತಿದೆ. ಅಲ್ಲದೇ, ವಲಸಿಗರನ್ನು ಸಾಗಿಸಲು ಮಿಲಿಟರಿ ಸಾರಿಗೆ ವಿಮಾನಗಳನ್ನು ಬಳಸಲಾಗುತ್ತಿದೆ.
ವಲಸಿಗರನ್ನು ಗಡಿಪಾರು ಮಾಡಲು ಮಿಲಿಟರಿ ವಿಮಾನಗಳನ್ನು ಬಳಸುವುದು ಮತ್ತು ಅವರನ್ನು ಮಿಲಿಟರಿ ನೆಲೆಗಳಲ್ಲಿ ಇರಿಸುವುದು ಸೇರಿದಂತೆ ತಮ್ಮ ವಲಸೆ ಕಾರ್ಯಸೂಚಿಯನ್ನು ಜಾರಿಗೊಳಿಸಲು ಟ್ರಂಪ್ ಆಡಳಿತವು ಮಿಲಿಟರಿಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ.
ಟೆಕ್ಸಾಸ್‌ನ ಎಲ್ ಪಾಸೊ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಅಮೆರಿಕದ ಅಧಿಕಾರಿಗಳು ಬಂಧಿಸಿರುವ 5,000 ಕ್ಕೂ ಹೆಚ್ಚು ವಲಸಿಗರನ್ನು ಗಡಿಪಾರು ಮಾಡಲು ಪೆಂಟಗನ್ ವಿಮಾನಗಳ ಸೇವೆಯನ್ನು ಪ್ರಾರಂಭಿಸಿದೆ.