newsics.com
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣವನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಇದೀಗ ಸಂಕಷ್ಟು ಎದುರಾಗಿದ್ದು, ಬಿಹಾರದ ಮುಜಾಫರ್‌ಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುಧೀರ್ ಓಜಾ ಎಂಬುವವರು ಸೋನಿಯಾ ಗಾಂಧಿ ವಿರುದ್ಧ ಮುಜಾಫರ್ಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಫೆಬ್ರವರಿ 10 ರಂದು ಪ್ರಕರಣದ ವಿಚಾರಣೆ ನಿಗದಿಪಡಿಸಿದೆ.
ಈ ಬಗ್ಗೆ ಮಾತನಾಡಿರುವ ಅರ್ಜಿದಾರ ಸುಧೀರ್ ಓಜಾ, ರಾಷ್ಟಪತಿಗಳ ಕುರಿತು ಸೋನಿಯಾ ಗಾಂಧಿ ನೀಡಿರುವ ಹೇಳಿಕೆ ಅತ್ಯಂತ ಅವಹೇಳನಕಾರಿಯಾಗಿದೆ. ರಾಷ್ಟ್ರಪತಿ ಮಹಿಳೆಯಾಗಿದ್ದಾರೆ ಮತ್ತು ಬುಡಕಟ್ಟು ಸಮುದಾಯದಿಂದ ಬಂದವರು. ಅವರ ವಿರುದ್ಧ ಈ ಹೇಳಿಕೆ ಆಕ್ಷೇಪಾರ್ಹ. ನ್ಯಾಯಾಲಯಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ಅರ್ಜಿದಾರ ಸುಧೀರ್ ಓಜಾ ತಿಳಿಸಿದ್ಧಾರೆ.
ಸೋನಿಯಾ ಗಾಂಧಿ ಹೇಳಿದ್ದೇನು?
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಕುರಿತು ಸೋನಿಯಾ ಗಾಂಧಿ ಅವರಿಗೆ ಸಂಸತ್ತಿನ ಹೊರಗಡೆ ಪ್ರಶ್ನೆ ಕೇಳಿದಾಗ, ಪೂರ್ ಲೇಡಿ, ರಾಷ್ಟ್ರಪತಿ ತುಂಬಾ ದಣಿದಿದ್ದರು. ಭಾಷಣದೂದ್ದಕ್ಕೂ ಸುಳ್ಳು ಭರವಸೆಗಳೇ ತುಂಬಿದ್ದವು ಎಂದು ಹೇಳಿದ್ದಾರೆ. ಇದಲ್ಲದೆ ರಾಹುಲ್ ಸೋನಿಯಾ ಗಾಂಧಿಗೆ ಹೇಳಿಕೊಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಸೋನಿಯಾ ಗಾಂಧಿ ಹೇಳಿಕೆ ನೀಡಿದಾಗ ಸಂಸದರಾದ ರಾಹುಲ್ ಹಾಗೂ ಪ್ರಿಯಾಂಕ ವಾದ್ರಾ ಕೂಡ ಜತೆಯಲ್ಲಿದ್ದರು. ಇತ್ತ ಸೋನಿಯಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿದೆ.