newsics.com
ಬೆಂಗಳೂರು: ‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ಕುಮಾರ್ ಹೊಸಮನಿ ಸೇರಿದಂತೆ ಮೂವರು ಅಧಿಕಾರಿಗಳು ತಮ್ಮದೇ ಇಲಾಖೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜ’ ಎಂದು ಈ ಬಗ್ಗೆ ರಚಿಸಲಾಗಿದ್ದ ಆಂತರಿಕ ದೂರು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.
ಸಂತ್ರಸ್ತೆಯೊಬ್ಬರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಲಾ ಶಿಕ್ಷಣ ಮತ್ತು ಗ್ರಂಥಾಲಯ ಇಲಾಖೆ ರಚಿಸಿದ್ದ ಆಂತರಿಕ ದೂರು ಸಮಿತಿ, ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿತ್ತು. ವಿಚಾರಣೆಯ ವಿವರಗಳನ್ನು ಒಳಗೊಂಡ 70 ಪುಟಗಳ ವರದಿ ಇಲಾಖೆಗೆ ಸಲ್ಲಿಕೆಯಾಗಿತ್ತು. ವರದಿಯನ್ನು ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರ ಪ್ರತಿ ಇದೀಗ ಲಭ್ಯವಾಗಿದೆ.
ಹೊಸಮನಿ ಹಾಗೂ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಎಚ್. ಚಂದ್ರಶೇಖರ್ ಹಾಗೂ ಗ್ರಂಥಾಲಯ ಸಹಾಯಕ ಎಚ್.ಜಿ. ನಾರಾಯಣಮೂರ್ತಿ ಅವರು ತಮ್ಮ ಸ್ಥಾನ ದುರುಪಯೋಗ ಪಡಿಸಿಕೊಂಡು, ಕಚೇರಿ ಕೆಲಸದ ಅನುಕೂಲ ಮಾಡಿಕೊಡುವುದಾಗಿ ಆಮಿಷ ಒಡ್ಡುವ, ಶಿಸ್ತುಕ್ರಮ ಕೈಗೊಳ್ಳುವಾಗಿ ಬೆದರಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದರು. ಹೀಗಾಗಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜವೆಂದು ಹೇಳಲಾಗಿದೆ.