newsics.com | ನ್ಯೂಸಿಕ್ಸ್
ನವದೆಹಲಿ: ದೇಶದ ಸ್ಪರ್ಧಾತ್ಮಕ ಹಾಗೂ ಶೈಕ್ಷಣಿಕ ಪರೀಕ್ಷಾ ಪದ್ಧತಿಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ಹಾಗೂ ಖ್ಯಾತ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರ ಸಾರಥ್ಯದಲ್ಲಿ ಉನ್ನತ ಮಟ್ಟದ ‘ಹೈ-ಪವರ್ ಟಾಸ್ಕ್ ಫೋರ್ಸ್’ ಒಂದನ್ನು ರಚಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ದೇಶದ ಜನತೆಗೆ ವಿಡಿಯೋ ಸಂದೇಶ ಕಳುಹಿಸಿರುವ ಪ್ರಧಾನಿಯವರು, ಯುವ ಜನತೆ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಕಾಪಾಡಲು ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರೆ ಅಕ್ರಮಗಳ ಮೂಲಕ ವಿದ್ಯಾರ್ಥಿಗಳ ಜೀವನದ ಜತೆ ಆಟವಾಡಿದ ದುಷ್ಕರ್ಮಿಗಳು ಈಗಾಗಲೇ ಜೈಲು ಪಾಲಾಗಿದ್ದಾರೆ. ಅಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸಹ ಅಸ್ತಿತ್ವಕ್ಕೆ ತರಲಾಗಿದೆ ಎಂದು ಅವರು ನುಡಿದಿದ್ದಾರೆ.
ಕೇವಲ ಶಿಕ್ಷೆ ವಿಧಿಸುವುದಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ಸಂಪೂರ್ಣ ದೋಷರಹಿತ ಮತ್ತು ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಪರೀಕ್ಷೆಗಳ ಸಂಪೂರ್ಣ ಪ್ರಕ್ರಿಯೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಎಲ್ಲಾ ಸುಧಾರಣೆಗಳ ನೀಲಿನಕ್ಷೆ ತಯಾರಿಸುವ ಜವಾಬ್ದಾರಿಯನ್ನು ನಂದನ್ ನಿಲೇಕಣಿ ನೇತೃತ್ವದ ಸಮಿತಿಗೆ ವಹಿಸಲಾಗಿದೆ.
ಕಾರ್ಯಪಡೆ ಸದಸ್ಯರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಗುಪ್ತಚರ ಬ್ಯೂರೋ(ಐಬಿ)ದ ಮಾಜಿ ನಿರ್ದೇಶಕ ತಪನ್ ದೇಕಾ, ಐಐಟಿ ಚೆನ್ನೈನ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕವಲ್ ಮತ್ತು ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನಾ ಅವರು ಈ ಪರೀಕ್ಷಾ ಕಾರ್ಯಪಡೆಯ ಪ್ರಮುಖ ಸದಸ್ಯರಾಗಿದ್ದಾರೆ.
‘ಇ-ಗೌವ್ ಫೌಂಡೇಶನ್’ನ ಸಹ-ಸ್ಥಾಪಕರಾಗಿ, ತಂತ್ರಜ್ಞಾನದ ಮೂಲಕ ನಗರ ಆಡಳಿತವನ್ನು ಸುಧಾರಿಸುವ ಸಂಸ್ಥೆಯ ಧ್ಯೇಯೋದ್ದೇಶವನ್ನು ರೂಪಿಸುವಲ್ಲಿ, ನಂದನ್ ನಿಲೇಕಣಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ತಂತ್ರಜ್ಞಾನ ಬಳಕೆಯ ಮೂಲಕ ಭಾರತದ ಪ್ರಮುಖ ವ್ಯವಸ್ಥೆಗಳನ್ನು ಗಟ್ಟಿಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
HIGH POWERED TASK FORCE on examination reforms under the leadership of Shri Nandan Nilekani constituted.@NandanNilekani pic.twitter.com/mMpmPdIEL5
— Narendra Modi (@narendramodi) July 26, 2026