newsics.com | ನ್ಯೂಸಿಕ್ಸ್
ಮಳೆಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ತಂಪಾದ ತೇವಾಂಶ ಹೆಚ್ಚಾಗಿ, ಪ್ರತಿಯೊಬ್ಬರ ಮನೆಗಳಲ್ಲೂ ಸಣ್ಣಪುಟ್ಟ ಕ್ರಿಮಿಕೀಟಗಳು ಹಾಗೂ ನೊಣ-ಇರುವೆಗಳ ಉಪಟಳ ದುಪ್ಪಟ್ಟಾಗುತ್ತದೆ. ನಿತ್ಯ ಮನೆ ಶುಚಿಗೊಳಿಸಿದರೂ ಈ ಸಮಸ್ಯೆಗೆ ಮುಕ್ತಿ ಸಿಗುವುದು ಕಷ್ಟ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮತ್ತು ರಾಸಾಯನಿಕಯುಕ್ತ ಫ್ಲೋರ್ ಕ್ಲೀನರ್‌ಗಳ ಮೊರೆ ಹೋಗುವ ಬದಲು, ನಮ್ಮ ಅಡುಗೆಮನೆಯಲ್ಲೇ ಲಭ್ಯವಿರುವ ಪದಾರ್ಥಗಳಿಂದ ಸುಲಭ ಪರಿಹಾರ ಕಂಡುಕೊಳ್ಳಬಹುದು.
ನೆಲ ಒರೆಸುವ ನೀರಿಗೆ ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ಕೀಟಗಳನ್ನು ದೂರವಿಡುವುದಷ್ಟೇ ಅಲ್ಲದೆ, ಮನೆಗೆ ನೈಸರ್ಗಿಕ ಸುವಾಸನೆ ಮತ್ತು ಶುಚಿತ್ವವನ್ನು ನೀಡಬಹುದು.
ಸುಲಭವಾಗಿ ಬಳಸಬಹುದಾದ 6 ಪರಿಣಾಮಕಾರಿ ಮಾರ್ಗಗಳು
- ಉಪ್ಪು ಮಿಶ್ರಿತ ನೀರು: ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಅಡುಗೆ ಉಪ್ಪು ಬೆರೆಸಿ ನೆಲ ಒರೆಸುವುದರಿಂದ ಸಣ್ಣ ಕ್ರಿಮಿಗಳು ಮತ್ತು ಇರುವೆಗಳ ಸಂಚಾರ ತಕ್ಷಣವೇ ಕಡಿಮೆಯಾಗುತ್ತದೆ.
- ಬೇವಿನ ಎಲೆಯ ರಸ: ನೀರಿಗೆ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ, ಆ ನೀರು ಆರಿದ ನಂತರ ನೆಲ ಒರೆಸಲು ಬಳಸಿ. ಬೇವಿನ ಕಹಿ ಹಾಗೂ ಕ್ರಿಮಿನಾಶಕ ಗುಣಗಳು ಕೀಟಗಳನ್ನು ಸುಳಿಯದಂತೆ ನೋಡಿಕೊಳ್ಳುತ್ತವೆ.
- ನಿಂಬೆ ರಸ: ಉಗುರುಬೆಚ್ಚಗಿನ ನೀರಿಗೆ ನಿಂಬೆ ರಸ ಸೇರಿಸಿ ಒರೆಸಿದರೆ, ಅದರಲ್ಲಿರುವ ಸಿಟ್ರಿಕ್ ಆಮ್ಲವು ನೊಣ-ಸೊಳ್ಳೆಗಳನ್ನು ಓಡಿಸಿ ಮನೆಗೆ ತಾಜಾ ಪರಿಮಳ ನೀಡುತ್ತದೆ.
- ಬಿಳಿ ವಿನೆಗರ್ ಬಳಸಿ: ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಒರೆಸಿದಾಗ ಇರುವೆಗಳ ಹಾವಳಿ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ. (ಗಮನಿಸಿ: ಮಾರ್ಬಲ್ ಮತ್ತು ಗ್ರಾನೈಟ್ ನೆಲಕ್ಕೆ ವಿನೆಗರ್ ಹೆಚ್ಚು ಬಳಸಬೇಡಿ).
- ಪುದೀನಾ ಅಥವಾ ಪೆಪ್ಪರ್‌ಮಿಂಟ್ ಆಯಿಲ್: ನೀರಿನಲ್ಲಿ ಕೆಲವು ಹನಿ ಪೆಪ್ಪರ್‌ಮಿಂಟ್ ಎಣ್ಣೆ ಹಾಕಿ ಒರೆಸಿದರೆ, ಅದರ ತೀವ್ರ ಗಂಧಕ್ಕೆ ನೊಣ-ಇರುವೆಗಳು ದೂರ ಓಡುತ್ತವೆ.
- ಅಡುಗೆ ಸೋಡಾ ಮತ್ತು ಲಿಕ್ವಿಡ್ ಸೋಪ್: ತೀವ್ರವಾದ ಕೊಳೆ ಹಾಗೂ ದುರ್ವಾಸನೆ ಹೋಗಲಾಡಿಸಲು ನೀರಿಗೆ ಸ್ವಲ್ಪ ಅಡುಗೆ ಸೋಡಾ ಮತ್ತು ಲಿಕ್ವಿಡ್ ಸೋಪ್ ಸೇರಿಸಿ ಸ್ವಚ್ಛಗೊಳಿಸಬಹುದು. ಇದು ಅಡುಗೆಮನೆಗೆ ಸೂಕ್ತ.
UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ