newsics.com | ನ್ಯೂಸಿಕ್ಸ್
ಮೈಸೂರು: ಕಳೆದ ಹಲವು ದಿನಗಳಿಂದ ಮೈಸೂರು ಸರಗೂರು ತಾಲೂಕಿನ ಮುಳ್ಳೂರು ಮತ್ತು ಬೆಣ್ಣೆಗೆರೆ ಗ್ರಾಮಗಳ ಜನರನ್ನು ನಿದ್ದೆಗೆಡಿಸಿದ್ದ ಹುಲಿ ಫ್ಯಾಮಿಲಿ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.
ಐದು ಪುಟ್ಟ ಮರಿಗಳೊಂದಿಗೆ ಗ್ರಾಮದ ಅಂಚಿನಲ್ಲಿ ಬೀಡುಬಿಟ್ಟಿದ್ದ ಹೆಣ್ಣು ಹುಲಿ ರಾಣಿಯನ್ನು ಇಲಾಖೆಯು ಅತ್ಯಂತ ಜಾಣ್ಮೆ ಮತ್ತು ಸಾಹಸದಿಂದ ಸೆರೆಹಿಡಿದು, ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಿದೆ.
ಗ್ರಾಮದ ಸಮೀಪವೇ ಹುಲಿ ಕಾಣಿಸಿಕೊಳ್ಳುತ್ತಿದ್ದುದರಿಂದ ಜನರು ಭಯಭೀತರಾಗಿದ್ದರು. ತಮ್ಮ ಮರಿಗಳ ರಕ್ಷಣೆಗಾಗಿ ಹೆಣ್ಣು ಹುಲಿ ಆಕ್ರಮಣಕಾರಿ ವರ್ತನೆ ತೋರುತ್ತಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಅರಣ್ಯ ಇಲಾಖೆ, ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಅನುಭವಿ ಅಧಿಕಾರಿಗಳು, ಪಶುವೈದ್ಯರು ಮತ್ತು ಅರಣ್ಯ ಸಿಬ್ಬಂದಿಯ ದೊಡ್ಡ ತಂಡವೇ ಅಖಾಡಕ್ಕಿಳಿದಿತ್ತು.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿತು. ಕತ್ತಲಲ್ಲೂ ಹುಲಿಯ ಚಲನವಲನಗಳನ್ನು ಪತ್ತೆಹಚ್ಚಲು ಥರ್ಮಲ್ ಡ್ರೋನ್‍ಗಳನ್ನು ಬಳಸಲಾಯಿತು. ಪತ್ತೆಯಾದ ನಂತರ, ಅರಣ್ಯ ಸಿಬ್ಬಂದಿ ಮಹೇಂದ್ರ ಹೆಸರಿನ ಆನೆಯ ಸಹಾಯ ಪಡೆದರು. ಆನೆ ಮೇಲೆ ಕುಳಿತಿದ್ದ ಪಶುವೈದ್ಯ ಡಾ. ವಾಸಿಂ ಮಿರ್ಜಾ ಅವರು ಅತ್ಯಂತ ನಿಖರವಾಗಿ ಹುಲಿಗೆ ಅರವಳಿಕೆ ಬಾಣ ಪ್ರಯೋಗಿಸಿದರು. ಮಂಪರು ಆವರಿಸಿದ ಹುಲಿಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಯಿತು.
ಸೆರೆ ಸಿಕ್ಕ ಹುಲಿಗೆ ಸುಮಾರು 12 ವರ್ಷ ವಯಸ್ಸಾಗಿದ್ದರೆ, ಅದರ ಮರಿಗಳಿಗೆ ಕೇವಲ 1-2 ತಿಂಗಳಾಗಿವೆ. ತಜ್ಞರ ಪ್ರಕಾರ, ಮರಿಗಳಿಗೆ ಸುರಕ್ಷಿತ ತಾಣ ಹುಡುಕಲು ಹುಲಿ ಜನವಸತಿ ಪ್ರದೇಶದ ಅಂಚಿಗೆ ಬಂದಿತ್ತು. ತಾಯಿ ಮತ್ತು ಮರಿಗಳ ಆರೋಗ್ಯ ತಪಾಸಣೆ ನಡೆಸಿದ ಬಳಿಕ, ವಿಶೇಷ ವಾಹನದಲ್ಲಿ ಬೆಂಗಳೂರಿನ ಬನ್ನೇರುಘಟ್ಟ ವನ್ಯಜೀವಿ ಕೇಂದ್ರಕ್ಕೆ ಕರೆದೊಯ್ಯಲಾಯಿತು.
Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!