newsics.com | ನ್ಯೂಸಿಕ್ಸ್
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು ಇಂದಿಗೆ ಭರ್ತಿ ಒಂದು ತಿಂಗಳು ಪೂರೈಸಿದ್ದಾರೆ. ಈ ಅತ್ಯಲ್ಪ 30 ದಿನಗಳ ಅವಧಿಯಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ಸಿಎಂ, ಜನಕಲ್ಯಾಣ, ಕಾನೂನು ಸುವ್ಯವಸ್ಥೆ, ಬೆಂಗಳೂರು ನಗರಾಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಹಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ.
ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಸಿಎಂ ಮೊದಲ ತಿಂಗಳಲ್ಲೇ ಉಡುಗೊರೆ ನೀಡಿದ್ದಾರೆ.
- ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ 72 ಸಾವಿರ ಹುದ್ದೆಗಳನ್ನು ಕೇವಲ 6 ತಿಂಗಳೊಳಗೆ ಭರ್ತಿ ಮಾಡಲು ಕಟ್ಟುನಿಟ್ಟಿನ ಗಡುವು ವಿಧಿಸಿದ್ದಾರೆ.
- ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಗೂ ಆರ್ಥಿಕ ಹೊರೆಯಾಗದಂತೆ ಉಚಿತ ಬಸ್ ಪಾಸ್ ಸೌಲಭ್ಯ ಪ್ರಕಟಿಸಲಾಗಿದೆ.
- ಗ್ರಾಮೀಣ ಭಾಗದ ಯುವಶಕ್ತಿಯನ್ನು ಸಂಘಟಿಸಲು ಪ್ರತಿ ವಾರ್ಡ್ ಮತ್ತು ಪಂಚಾಯಿತಿಯಲ್ಲಿ ‘ಭಾರತ ಜೋಡೋ ಯುವಕರ ಸಂಘ’ ಸ್ಥಾಪಿಸಿ, ತಲಾ 10 ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿದ್ದಾರೆ.
- ಇನ್ನು ಕಾಲೇಜುಗಳಲ್ಲಿ ವಿದ್ಯಾರ್ಥಿ ನಾಯಕತ್ವ ಬೆಳೆಸಲು ಮರುಚುನಾವಣೆ ನಡೆಸುವ ಚಿಂತನೆ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ.
ನಗರಾಭಿವೃದ್ಧಿ, ವಸತಿ ಮತ್ತು ಮೂಲಸೌಕರ್ಯ
- ಖಾತಾ ಪರಿವರ್ತನೆ: ರಾಜ್ಯಾದ್ಯಂತ ಆಸ್ತಿಗಳ ‘ಬಿ’ ಖಾತೆಯನ್ನು ಸುಲಭವಾಗಿ ‘ಎ’ ಖಾತೆಯಾಗಿ ಬದಲಾಯಿಸಲು ಹಸಿರು ನಿಶಾನೆ ನೀಡಲಾಗಿದೆ.
- ಒಸಿ ವಿನಾಯಿತಿ: 2500 ಚದರ ಅಡಿವರೆಗಿನ ಹೊಸ ಮನೆಗಳಿಗೆ ಕಾಯಂ ಕರೆಂಟ್ ಕನೆಕ್ಷನ್ ಪಡೆಯಲು ಇದ್ದ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ನಿಯಮವನ್ನು ಸಡಿಲಗೊಳಿಸಲಾಗಿದೆ.
- ಗುಂಡಿ ಮುಕ್ತ ರಸ್ತೆ: ಬೆಂಗಳೂರಿನ ರಸ್ತೆಗಳ ದುರಸ್ತಿಗೆ 2,000 ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ಘೋಷಿಸಲಾಗಿದ್ದು, ಹೆಬ್ಬಾಳ ಬಳಿ ಟ್ರಾಫಿಕ್ ನಿವಾರಣೆಗೆ ಸಣ್ಣ ಸುರಂಗ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕೆೆಂಪೇಗೌಡ ಬಡಾವಣೆಯ 10 ಪಥಗಳ ‘ಎಸ್.ಎಂ ಕೃಷ್ಣ ರಸ್ತೆ’ಯನ್ನು ಸಾರ್ವಜನಿಕ ಮುಕ್ತಗೊಳಿಸಲಾಗಿದೆ.
ಆಡಳಿತದಲ್ಲಿ ಶಿಸ್ತು ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆ
ಸಾರ್ವಜನಿಕರ ದೂರುಗಳ ತ್ವರಿತ ಇತ್ಯರ್ಥಕ್ಕಾಗಿ ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಸಚಿವಾಲಯವನ್ನೇ ಸೃಷ್ಟಿಸಿರುವುದು ಈ ಅವಧಿಯ ಮೈಲಿಗಲ್ಲು. ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಗೆ ಜಿಪಿಎಸ್ ಆಧಾರಿತ ಕಡ್ಡಾಯ ಹಾಜರಾತಿ ತರಲಾಗಿದೆ. ಭ್ರಷ್ಟಾಚಾರದ ವಿರುದ್ಧ ದೂರಿಡಲು ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸಲಾಗಿದೆ. ರಾಜ್ಯದಲ್ಲಿ ರೌಡಿಸಂ ಹತ್ತಿಕ್ಕಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ರೌಡಿ ನಿಗ್ರಹ ಪಡೆ ಹಾಗೂ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ. 2028ರ ವೇಳೆಗೆ ರಾಜ್ಯವನ್ನು ಸಂಪೂರ್ಣ ಡ್ರಗ್ಸ್ ಮುಕ್ತ ಮಾಡಲು ಪಣ ತೊಡಲಾಗಿದೆ.
ನೀರಾವರಿ ಮತ್ತು ದೆಹಲಿ ಮಟ್ಟದ ರಾಜತಾಂತ್ರಿಕತೆ
ಜಲಸಂಪನ್ಮೂಲ ರಕ್ಷಣೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅತ್ಯಂತ ಜಾಣ್ಮೆಯ ಹೆಜ್ಜೆ ಇಟ್ಟಿದ್ದಾರೆ. ತುಂಗಭದ್ರಾ ಜಲಾಶಯದ ಸ್ಪಿಲ್ ಗೇಟ್ ಉದ್ಘಾಟನೆ ಹಾಗೂ ಹೂಳು ತೆಗೆಯುವ ವಿಚಾರದಲ್ಲಿ ಕೇಂದ್ರ ಸಚಿವ ಸಿ.ಆರ್ ಪಾಟೀಲ್ ನೇತೃತ್ವದಲ್ಲಿ ನೆರೆ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳನ್ನು ಒಪ್ಪಿಸಿ ಒಮ್ಮತದ ತೀರ್ಮಾನ ತಂದಿದ್ದಾರೆ. ಬಹುಕಾಲದ ಕನಸಾದ ಮೇಕೆದಾಟು ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆದು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ. ದೆಹಲಿಗೆ ಭೇಟಿ ನೀಡಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವರನ್ನು ಭೇಟಿಯಾಗಿ ಮೆಟ್ರೋ, ರೈಲು ಯೋಜನೆಗಳಿಗೆ ವಿಶೇಷ ಅನುದಾನದ ಭರವಸೆ ತಂದಿದ್ದಾರೆ.
ಇತರ ಗಮನಾರ್ಹ ಮಾನವೀಯ ನಿರ್ಧಾರಗಳು
- ವಾಲ್ ಆಫ್ ಗ್ರಾಟಿಟ್ಯೂಡ್: ಅಭಿವೃದ್ಧಿ ಯೋಜನೆಗಳಿಗೆ ಜಮೀನು ನೀಡಿದ ರೈತರ ಗೌರವಾರ್ಥ ವಿಶೇಷ ಸ್ಮರಣಾ ಗೋಡೆ ನಿರ್ಮಾಣ.
- ಪುಸ್ತಕ ಪ್ರೇಮಿಗೆ ನೆರವು: ಮಂಡ್ಯದ ಅಂಕೇಗೌಡರ ಅಪರೂಪದ ಗ್ರಂಥ ಭಂಡಾರ ರಕ್ಷಣೆಗೆ 5 ಕೋಟಿ ರೂಪಾಯಿ ಧನಸಹಾಯ ಹಾಗೂ 2 ಎಕರೆ ಜಾಗ ಮಂಜೂರು.
- ಪರಿಸರ ದಾಖಲೆ: ಕೆೆಂಪೇಗೌಡ ಜಯಂತಿ ಅಂಗವಾಗಿ ಬಿಡಿಎ ವತಿಯಿಂದ ಒಂದೇ ಬಾರಿಗೆ 15 ಲಕ್ಷ ಸಸಿಗಳನ್ನು ನೆಟ್ಟು ಗಿನ್ನಿಸ್ ದಾಖಲೆ ಬರೆಯಲಾಗಿದೆ.
- ಬಡವರ ವಸತಿ ಯೋಜನೆಗಳಲ್ಲಿ ಕೇವಲ ಸೈಟ್ ಕೊಡುವ ಬದಲು ನೇರವಾಗಿ ಮನೆಗಳನ್ನೇ ಕಟ್ಟಿಕೊಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತದ ಮೊದಲ 30 ದಿನಗಳು ಕೇವಲ ಜನಪ್ರಿಯ ಭರವಸೆಗಳಿಗಷ್ಟೇ ಸೀಮಿತವಾಗದೆ, ತಳಮಟ್ಟದ ವ್ಯವಸ್ಥಿತ ಸುಧಾರಣೆ ಹಾಗೂ ದೀರ್ಘಕಾಲದ ಅಭಿವೃದ್ಧಿಗೆ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟಿವೆ.
Rain Alert ವರುಣನ ರೌದ್ರನರ್ತನಕ್ಕೆ ನಡುಗಿದ ಕರಾವಳಿ: ಉಡುಪಿ, ಮಂಗಳೂರು ಸೇರಿ 3 ಜಿಲ್ಲೆಗಳಿಗೆ ರೆಡ್ ಅಲರ್ಟ್