newsics.com| ನ್ಯೂಸಿಕ್ಸ್
ಯೂಟ್ಯೂಬ್ ವಿಡಿಯೋ ನೋಡಿ ಮನೆಯಲ್ಲಿಯೇ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ 32 ವರ್ಷದ ಮಹಿಳೆಯೊಬ್ಬರು ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ನಡೆದಿದೆ.
ಈಕೆಯ ಪತಿ ಹೆರಿಗೆಯ ಬಗ್ಗೆ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಉತ್ತುಕುಳಿ ತಾಲ್ಲೂಕಿನ ಪುಂಜೈತಲವೈಪಾಳ್ಯಂನ ಕೆ. ಶಶಿಕಲಾ ಅವರನ್ನು ತೀವ್ರ ಗಂಭೀರ ಸ್ಥಿತಿಯಲ್ಲಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಭಾನುವಾರ ಬೆಳಿಗ್ಗೆ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯ ಹೇಳಿಕೆಯ ಪ್ರಕಾರ, “ಮಹಿಳೆಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ. ಸಿಸೇರಿಯನ್ ಗೆ ಬಹಳ ಹೆದರಿಕೊಂಡಿದ್ದರು. ಮೊದಲ ಹೆರಿಗೆ ನಂತರ ಅವರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಎರಡನೇ ಬಾರಿ ಚೆಕ್ಅಪ್ ಮಾಡಿಸಿಕೊಳ್ಳಲು ಸಹ ಆಸ್ಪತ್ರೆಗೆ ಹೋಗಲಿಲ್ಲ. ಮನೆಯವರು ಹೇಳಿದರೂ ಸಹ ಆಸ್ಪತ್ರೆಗೆ ಹೋಗಲು ತಯಾರಿರಲಿಲ್ಲ. ಹಾಗಾಗಿ ಮನೆಯಲ್ಲಿಯೇ ಹೆರಿಗೆ ಮಾಡಿಸಲಾಗಿದೆ”.
ಜೂನ್ 24 ರಂದು ಬೆಳಗಿನ ಜಾವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಪತಿ ಕೋಲಂತಸಾಮಿ (35) ಮತ್ತು ಅತ್ತೆ ಹೆರಿಗೆಗೆ ಸಹಾಯ ಮಾಡಿದರು. ಯೂಟ್ಯೂಬ್‌ನಲ್ಲಿ ನೈಸರ್ಗಿಕ ಹೆರಿಗೆಯ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆರಿಗೆಯ ನಂತರ ಮಹಿಳೆಗೆ ಪ್ರಸವಾನಂತರದ ರಕ್ತಸ್ರಾವವಾಯಿತು. ಅದು ಕಡಿಮೆಯಾಗದೆ ಹೆಚ್ಚಾಗುತ್ತಲೇ ಹೋಗಿತ್ತು. ಅವರನ್ನು ಪೆರುಂಡುರೈನಲ್ಲಿರುವ ಸರ್ಕಾರಿ ಈರೋಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ, ಜೂನ್ 25 ರಂದು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುನ್ನತ್ತೂರಿನ ಬ್ಲಾಕ್ ವೈದ್ಯಕೀಯ ಅಧಿಕಾರಿ ನೀಡಿದ ದೂರಿನ ಮೇರೆಗೆ, ಉತುಕುಳಿ ಪೊಲೀಸರು ಕೋಲಂತಸಾಮಿ ವಿರುದ್ಧ ಐಪಿಸಿ ಸೆಕ್ಷನ್ 105 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಮೃತ ಮಹಿಳೆಯ ಕುಟುಂಬ ಸದಸ್ಯರು ಯಾವುದೇ ದೂರು ದಾಖಲಿಸಲು ಬಯಸಲಿಲ್ಲ. ದಂಪತಿ ಮನೆಯಲ್ಲಿ ನ್ಯಾಚುರಲ್ ಹೆರಿಗೆಗೆ ಯೋಜಿಸಿದ್ದರು ಎಂದು ಅವರು ಹೇಳಿದರು” ಎಂದು ಉತ್ತುಕುಲಿ ಇನ್ಸ್‌ಪೆಕ್ಟರ್ ಎಸ್. ಸರವಣನ್ ಹೇಳಿದರು.
ಹೆರಿಗೆಯ ನಂತರ ಶಿಶು ಆರೋಗ್ಯವಾಗಿ ಅದರ ಆರೋಗ್ಯವೂ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.