newsics.com/ನ್ಯೂಸಿಕ್ಸ್
ಮಲಯಾಳಂ ಚಿತ್ರರಂಗದ ಸ್ಟಾರ್ ದಂಪತಿಗಳಲ್ಲಿ ಒಬ್ಬರಾದ ಸ್ಟಾರ್ ನಟ ಫಹಾದ್ ಫಾಸಿಲ್ ಮತ್ತು ನಟಿ ನಜ್ರಿಯಾ ನಜೀಮ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಚರ್ಚೆಯನ್ನು ಪ್ರಾರಂಭಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಜೋಡಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹರಡಿತ್ತು.
ಆದರೆ, ಈ ವದಂತಿ ಬರಲು ಕಾರಣ ನಜ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಡಿದ ಪೋಸ್ಟ್. ಇದರೊಂದಿಗೆ, ಅಭಿಮಾನಿಗಳು ಮತ್ತು ನೆಟ್ಟಿಗರು ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದಾರೆ.
2014ರ ಬೆಂಗಳೂರು ಡೇಸ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಫಹಾದ್ ಫಾಸಿಲ್ ಮತ್ತು ನಜ್ರಿಯಾ ನಜೀಮ್ ಮೊದಲ ಬಾರಿಗೆ ಭೇಟಿ ಆಗುತ್ತಾರೆ. ಇದಾದ ಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದು ಅದೇ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ವಿಶೇಷ ಎಂದರೆ ಆಗಸ್ಟ್‌ನಲ್ಲಿ ತಿರುವನಂತಪುರದಲ್ಲಿ ವಿವಾಹವಾಗ್ತಾರೆ. ಅಂದಿನಿಂದ, ಇಬ್ಬರೂ ತಮ್ಮ ತಮ್ಮ ಸಿನಿಮಾ ಶೂಟಿಂಗ್‌ಗಳಲ್ಲಿ ಫುಲ್ ಬ್ಯುಸಿಯಾಗಿ ಬಿಡುತ್ತಾರೆ. ತಮ್ಮ ವೈಯಕ್ತಿಕ ಜೀವನವನ್ನು ಗುಪ್ತವಾಗಿ ಇಡುತ್ತಾರೆ.
ಆದರೆ, ನಜ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇತ್ತೀಚೆಗೆ ಮಾಡಿದ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೊದಲು, ಕೆಂಪು ಧ್ವಜದ ಹಿಂದೆ ಕಣ್ಣು ಮುಚ್ಚಿ ಓಡುವ ಎತ್ತುಗಳು ಹುಚ್ಚು ಎಂದು ನಾನು ಭಾವಿಸುತ್ತಿದ್ದೆ. ಆದರೆ ಈಗ ನಾನು ಅದನ್ನೇ ಮಾಡುತ್ತಿದ್ದೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಕಾಮೆಂಟ್ ಯಾರನ್ನು ಗುರಿಯಾಗಿರಿಸಿಕೊಂಡು ಮಾಡಲಾಗಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಊಹಾಪೋಹಗಳು ಪ್ರಾರಂಭವಾದವು.
ಈ ಪೋಸ್ಟ್ ನೋಡಿದ ಕೆಲವು ರೆಡ್ಡಿಟ್ ಬಳಕೆದಾರರು ನಜ್ರಿಯಾ ತಮ್ಮ ಪತಿ ಫಹಾದ್ ಫಾಸಿಲ್ ಅವರನ್ನು ಉಲ್ಲೇಖಿಸುತ್ತಿದ್ದಾರೆಂದು ಭಾವಿಸಿದ್ದರು. ಶೀಘ್ರದಲ್ಲೇ, ವಿಚ್ಛೇದನದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಕೆಲವು ಅಭಿಮಾನಿಗಳು ಈ ಅಭಿಯಾನವನ್ನು ಟೀಕಿಸುತ್ತಿದ್ದಾರೆ. ನಜ್ರಿಯಾ ಹಿಂದೆಯೂ ಇದೇ ರೀತಿಯ ಪೋಸ್ಟ್‌ಗಳನ್ನು ಮಾಡಿದ್ದಾರೆ. ಇದನ್ನು ಅವರ ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡುವುದು ಸರಿಯಲ್ಲ ಎಂದು ಇನ್ನು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಮತ್ತೊಂದೆಡೆ, ಈ ಪೋಸ್ಟ್ ಮುಂಬರುವ ಗ್ರೇಷಿಯಸ್ ಎಲ್ ಕ್ಲಾಸಿಕೊ ಸಿನಿಮಾದ ಪ್ರಚಾರದ ಭಾಗವಾಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಟೋವಿನೋ ಥಾಮಸ್ ನಟಿಸಿರುವ ಈ ಸಿನಿಮಾದಲ್ಲಿ ನಜ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಕಥೆಯು ಸ್ಪ್ಯಾನಿಷ್ ಹಿನ್ನೆಲೆ ಮತ್ತು ಗೂಳಿ ಕಾಳಗದ ಅಂಶಗಳನ್ನು ಹೊಂದಿರುವುದರಿಂದ, ಈ ಪೋಸ್ಟ್ ಅದೇ ಸಿನಿಮಾದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವ ಪ್ರಚಾರವಾಗಿರಬಹುದು ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ.
ಇಲ್ಲಿಯವರೆಗೆ, ಫಹಾದ್ ಫಾಸಿಲ್ ಅಥವಾ ನಜ್ರಿಯಾ ನಜೀಮ್ ಈ ವದಂತಿಗಳಿಗೆ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದ್ದರಿಂದ, ಈ ವದಂತಿಗಳಲ್ಲಿ ಎಷ್ಟು ಸತ್ಯವಿದೆ ಎಂದು ತಿಳಿಯಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಪ್ರಸ್ತುತ, ದಂಪತಿಗಳ ವಿಚ್ಛೇದನ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ವಿಷಯವಾಗಿದೆ.