newsics.com/ನ್ಯೂಸಿಕ್ಸ್
ಮಹಿಳಾ ಟಿ20 ವಿಶ್ವಕಪ್ 2026 ಹಬ್ಬ ಅದ್ಧೂರಿಯಾಗಿ ನಡೆಯುತ್ತಿದೆ. ಈ ನಡುವೆ ಇದೀಗ ಟೀಮ್ ಇಂಡಿಯಾ ತಂಡದಿಂದ ಸ್ಟಾರ್ ಪ್ಲೇಯರ್, ಕನ್ನಡತಿ ಶ್ರೆಯಾಂಕಾ ಪಟೀಲ್ ಅವರು ಇಡೀ ಟೂರ್ನಿಯಿಂದ ಹೊರಬಿದ್ದಿದ್ದು, ಬಿಸಿಸಿಐ ಬದಲಿ ಆಟಗಾರ್ತಿಯನ್ನು ಘೋಷಣೆ ಮಾಡಿದೆ.
ಮ್ಯಾಂಚೆಸ್ಟರ್‌ನಲ್ಲಿ ಜೂನ್ 21ರಿಂದ ನಡೆಯಲಿರುವ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಸ್ಟಾರ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರ ಜಾಗಕ್ಕೆ ಬದಲಿ ಆಟಗಾರ್ತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಶ್ರೇಯಾಂಕಾ ಬದಲಿಗೆ ಹೊಸ ಆಟಗಾರ್ತಿಯ ಘೋಷಣೆ
ಜೂನ್ 17ರಂದು ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಆಡುವಾಗ ಶ್ರೇಯಾಂಕಾ ಪಾಟೀಲ್ ಅವರ ಕಾಲಿನ ತೀವ್ರವಾಗಿ ಗಾಯವಾಗಿತ್ತು. ತಕ್ಷಣ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು. ಸದ್ಯ ಅವರು ಈ ಇಡೀ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಈ ಹಿನ್ನೆಲೆ ಅವರ ಬದಲಿಗೆ 24 ವರ್ಷದ ಪ್ರೇಮಾ ರಾವತ್ ಅವರನ್ನು ಟೀಮ್ ಇಂಡಿಯಾಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ರಾಷ್ಟ್ರೀಯ ತಂಡಕ್ಕೆ ಆಯ್ಕ ಆಗಿರುವುದು ಇದೇ ಮೊದಲು
ಪ್ರೇಮಾ ರಾವತ್ ಅವರಿಗೆ ಭಾರತ ರಾಷ್ಟ್ರೀಯ ತಂಡದಿಂದ ಕರೆ ಬಂದಿರುವುದು ಇದೇ ಮೊದಲ ಬಾರಿಯಾಗಿದೆ. ಇವರು ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದಾರೆ. ಅಲ್ಲದೆ, ಜೂನ್ 20ರಿಂದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಗಾಗಿ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ‘ಭಾರತ ಎ’ ತಂಡದ ಭಾಗವೂ ಆಗಿದ್ದರು.
ಕ್ರಿಕೆಟ್ ಅಭಿಮಾನಿಗಳ ಕಣ್ಣು ಪ್ರೇಮಾ ರಾವತ್ ಮೇಲೆ
ಪ್ರೇಮಾ ರಾವತ್ ಅವರ ದಾಖಲೆಗಳನ್ನು ನೋಡುವುದಾದರೆ, ಅವರು ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ತಂಡದ ಪರವಾಗಿ ಇವರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಸತತ ಮೂರನೇ ಜಯದ ನಿರೀಕ್ಷೆಯಲ್ಲಿ ಭಾರತ
ಭಾರತ ತಂಡದ ಪ್ರಸ್ತುತ ವಿಶ್ವಕಪ್ ಅಭಿಯಾನದ ಬಗ್ಗೆ ಹೇಳುವುದಾದರೆ, ತಂಡವು ತನ್ನ ಮುಂದಿನ ರೋಚಕ ಜಿದ್ದಾಜಿದ್ದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಜ್ಜಾಗಿದೆ. ಜೂನ್ 21ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇವೆರಡೂ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಬೀಗುತ್ತಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧವೂ ಗೆದ್ದು ಸತತ ಮೂರನೇ ಜಯಭೇರಿ ಬಾರಿಸುವ ಉತ್ಸಾಹದಲ್ಲಿದೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಈ ಬಾರಿಯ ಟಿ20 ವಿಶ್ವಕಪ್ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಆರಂಭಿಸಿತ್ತು. ಇದಾದ ಬೆನ್ನಲ್ಲೇ ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧವೂ ಗೆಲುವು ಸಾಧಿಸಿ ಜಯದ ಓಟವನ್ನು ಮುಂದುವರಿಸಿದೆ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೂ ತನ್ನ ವಿಶ್ವಕಪ್ ಅಭಿಯಾನದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾವು ಭಾರತ ತಂಡಕ್ಕೆ ತೀವ್ರ ಪೈಪೋಟಿ ನೀಡಲು ಎದುರು ನೋಡುತ್ತಿದೆ. ಒಟ್ಟಿನಲ್ಲಿ ಈ ಪಂದ್ಯದಲ್ಲಿ ಭಾರತದ ಪರ ಕಣಕ್ಕಿಳಿಯುತ್ತಿರುವ ಪ್ರೇಮಾ ರಾವತ್ ಅವರು ಯಾವ ರೀತಿಯಾಗಿ ಪ್ರದರ್ಶನ ತೋರಲಿದ್ದಾರೆ ಎನ್ನುವುದೇ ಇದೀಗ ಕುತೂಹಲದ ವಿಚಾರವಾಗಿದೆ.