newsics.com/ನ್ಯೂಸಿಕ್ಸ್
ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುವುದನ್ನು ಕಲಿತಿದ್ದ ತೆಲಂಗಾಣದ ನಲ್ಗೊಂಡದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜು ಅಲಿಯಾಸ್ ಬೆಸವಾಡ ರಾಜೀವ್
(30) ಮತ್ತು ಆತನ ಪತ್ನಿ ದುರ್ಗಂ ಪಾವನಿ (26) ಎಂದು ಗುರುತಿಸಲಾಗಿದೆ.
ಹೈದರಾಬಾದ್ನಲ್ಲಿರುವ ದಂಪತಿಯ ನಿವಾಸದ ಮೇಲೆ ದಾಳಿ ನಡೆಸಿದ ತೆಲಂಗಾಣ ಪೊಲೀಸರು, ಅವರ ಬಳಿಯಿದ್ದ ನಕಲಿ ಕರೆನ್ಸಿ ನೋಟುಗಳು, ಪ್ರಿಂಟರ್ ಸ್ಕ್ಯಾನರ್ ಮತ್ತು ನೋಟು ಮುದ್ರಣಕ್ಕೆ ಬಳಸುತ್ತಿದ್ದ ಪೇಪರ್ ಸ್ಟಾಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ನಲ್ಗೊಂಡ ಡಿಎಸ್‌ಪಿ ಕೆ. ಶಿವರಾಮ್ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ನಕಲಿ ನೋಟು ಮುದ್ರಿಸುವುದನ್ನು ಕಲಿತಿದ್ದರು. ಇದಕ್ಕಾಗಿ ಅವರು ಆನ್‌ಲೈನ್‌ನಲ್ಲಿ ಹೆಚ್‌ಪಿ ಪ್ರಿಂಟರ್‌ಗಳು, ಬಾಂಡ್ ಪೇಪರ್ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಿ, ತಮ್ಮ ಮನೆಯಲ್ಲೇ 500 ರೂಪಾಯಿಯ ನಕಲಿ ನೋಟುಗಳನ್ನು ತಯಾರಿಸುತ್ತಿದ್ದರು.
ಆರೋಪಿಗಳು ನಕಲಿ ನೋಟುಗಳನ್ನು ತಯಾರಿಸಲು ಉತ್ತಮ ಗುಣಮಟ್ಟದ ಬಾಂಡ್ ಪೇಪರ್‌ಗಳನ್ನು ಬಳಸುತ್ತಿದ್ದರು.
ನೋಟುಗಳನ್ನು ಮುದ್ರಿಸಿದ ನಂತರ, ಅವುಗಳನ್ನು ಕತ್ತರಿ, ಅಸಲಿ ನೋಟುಗಳ ಆಕಾರಕ್ಕೆ ಕತ್ತರಿಸುತ್ತಿದ್ದರು. ಈ ದಂಪತಿ ಹಾಲಿನವನಿಗೆ ನಕಲಿ ನೋಟುಗಳನ್ನು ನೀಡಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ಹಾಲಿನವನಾದ ಆವುಲ ಕಿರಣ್ ಎಂಬಾತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದನು.
ದೂರು ದಾಖಲಾದ ತಕ್ಷಣ, ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಕಳೆದ ದಿನ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದೆ. ಬಂಧನದ ವೇಳೆ ನಡೆಸಿದ ದಾಳಿಯಲ್ಲಿ ಅವರ ಬಳಿಯಿದ್ದ 7,500 ರೂಪಾಯಿ ಮೌಲ್ಯದ 500 ರೂಪಾಯಿಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,