newsics.com/ನ್ಯೂಸಿಕ್ಸ್
ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಒಬೆರಾಯ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ, ಒಂದು ದಿನ ಶೂಟಿಂಗ್ ಮುಗಿಸಿ ಮನೆಗೆ ಮರಳಿದಾಗ ಅವರ ಪತ್ನಿ ಒಂದೇ ರೂಮ್ ಹಂಚಿಕೊಳ್ಳಲು ನಿರಾಕರಿಸಿದ ಘಟನೆಯನ್ನು ಅಕ್ಷಯ್ ನೆನಪಿಸಿಕೊಂಡಿದ್ದಾರೆ.
ಅಕ್ಷಯ್ ಅವರು ಬಾದ್ಷಾ ಶಾರುಖ್ ಖಾನ್ ನಟನೆಯ ‘ಕಿಂಗ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಅವರು ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರೊಂದಿಗೆ ‘ಫ್ಲೆಶ್’ (2020) ವೆಬ್ ಸರಣಿ ಹಾಗೂ ಸೂಪರ್ ಹಿಟ್ ‘ಫೈಟರ್’ (2024) ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ‘ಫ್ಲೆಶ್’ ಸರಣಿಯು ಅತ್ಯಂತ ಮನರಂಜನಾತ್ಮಕವಾಗಿದ್ದರೂ, ಅದರಲ್ಲಿನ ಕೆಲವು ಅಶ್ಲೀಲ ದೃಶ್ಯಗಳು ವೀಕ್ಷಿಸಲು ಮುಜುಗರ ತರಿಸುವಂತಿದ್ದವು.
ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಅಕ್ಷಯ್, ಫ್ಲೆಶ್ ಸರಣಿಯನ್ನು ನೋಡಿದ ನಂತರ ನನ್ನ ಪತ್ನಿ ಹಲವಾರು ವಾರಗಳ ಕಾಲ ನನ್ನೊಂದಿಗೆ ಒಂದೇ ಬೆಡ್ನಲ್ಲಿ ಮಲಗಲು ಸಹ ಸಿದ್ಧರಿರಲಿಲ್ಲ, ಆ ಸರಣಿಯು ನಿಜಕ್ಕೂ ನೋಡಲು ಕಷ್ಟವಾಗುವಂತಿದ್ದರೂ, ತುಂಬ ಚೆನ್ನಾಗಿ ಮೂಡಿಬಂದಿತ್ತು ಮತ್ತು ಅದೇ ಸಮಯದಲ್ಲಿ ಅದರ ನಿರ್ಮಾಪಕರು ನನ್ನೊಂದಿಗೆ ಮತ್ತೊಮ್ಮೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಜನರು ಕೇವಲ ಮಾತನಾಡುತ್ತಾರೆ, ಆದರೆ ಕೊಟ್ಟ ಮಾತನ್ನು ಯಾರೂ ಉಳಿಸಿಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟ ನಟ ಅಕ್ಷಯ್ ಒಬೆರಾಯ್, ನಿರ್ಮಾಪಕರು ತಮ್ಮ ಮಾತನ್ನು ಉಳಿಸಿಕೊಂಡು ತಮಗೆ ‘ಫೈಟರ್’ ಚಿತ್ರದಲ್ಲಿ ಅವಕಾಶ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ‘ಫೈಟರ್’ ಚಿತ್ರದ ದೇಶಪ್ರೇಮಿ, ಮುಗ್ಧ ಹಾಗೂ ಶ್ರಮಜೀವಿ ಯುವ ಅಧಿಕಾರಿಯಾದ ಬಶೀರ್ ಖಾನ್ (ಬ್ಯಾಶ್) ಪಾತ್ರವು, ಇದಕ್ಕೂ ಮುನ್ನ ತಾವು ನಟಿಸಿದ್ದ ‘ಫ್ಲೆಶ್’ ಸರಣಿಯ ಪಾತ್ರಕ್ಕೆ ತದ್ವಿರುದ್ಧವಾಗಿತ್ತು ಎಂದು ಅಕ್ಷಯ್ ಅವರು ತಿಳಿಸಿದ್ದಾರೆ.