newsics.com/ನ್ಯೂಸಿಕ್ಸ್
ಹೈದರಾಬಾದ್: ಮೃಗಶಿರ ಕಾರ್ತೆ ಅಂದರೆ ಮಾನ್ಸೂನ್ ಆರಂಭದಲ್ಲಿ ಶುರುವಾಗುವ ವಾರ್ಷಿಕ ಮೀನು ಔಷಧ( ಪ್ರಸಾದ) ವಿತರಣಾ ಕಾರ್ಯಕ್ರಮ ನಾಂಪಲ್ಲಿ ಎಗ್ಸಿಬಿಷನ್ ಮೈದಾನದಲ್ಲಿ ಆರಂಭವಾಗಿದೆ.
ಬಾಥಿನಿ ಸಹೋದರರು ಒದಗಿಸುವ ಮೀನು ಔಷಧವನ್ನು ಸೇವಿಸುವುದರಿಂದ ಅಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳಂತಹ ಕಾಯಿಲೆಗಳು ಗುಣವಾಗುತ್ತವೆ ಎಂದು ಇಲ್ಲಿನ ಬಹುತೇಕ ಜನರು ನಂಬುತ್ತಾರೆ.
ಒಟ್ಟಾರೆ ಒಂದೇ ದಿನದಲ್ಲಿ ಬರೋಬ್ಬರಿ 2.7 ಲಕ್ಷಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕರಿಸಿದ್ದು, ಒಟ್ಟು ಸಂಖ್ಯೆ ಮೂರು ಲಕ್ಷ ದಾಟುವ ಮುನ್ಸೂಚನೆ ಸಿಕ್ಕಿದೆ.
ಉಸಿರಾಟದ ತೊಂದರೆ ಹಾಗೂ ಅಸ್ತಮಾದಿಂದ ಬಳಲುತ್ತಿರುವವರಿಗೆ ಈ ಮೀನು ಪ್ರಸಾದವು ರಾಮಬಾಣ ಎಂಬ ಅಚಲ ನಂಬಿಕೆ ಜನರಲ್ಲಿದೆ. ಬಾತಿನಿ ಕುಟುಂಬದವರು ಅತ್ಯಂತ ರಹಸ್ಯವಾಗಿ ಸಿದ್ಧಪಡಿಸುವ ಗಿಡಮೂಲಿಕೆ ಪೇಸ್ಟ್ ಅನ್ನು ಜೀವಂತ ಸಣ್ಣ ಮುರ್ರೆಲ್ (Murrel) ಮೀನಿನ ಬಾಯಿಯಲ್ಲಿಟ್ಟು ರೋಗಿಗಳಿಗೆ ನುಂಗಿಸಲಾಗುತ್ತದೆ. ಶಾಖಾಹಾರಿಗಳಿಗಾಗಿ ಇದೇ ಗಿಡಮೂಲಿಕೆಯನ್ನು ಬೆಲ್ಲದೊಂದಿಗೆ ಬೆರೆಸಿ ನೀಡುವ ವ್ಯವಸ್ಥೆಯೂ ಇಲ್ಲಿದೆ.
ಬಾತಿನಿ ಕುಟುಂಬದ ಸದಸ್ಯ ಬಾತಿನಿ ಅನಿರುದ್ಧ್ ಗೌಡ್ ಅವರ ಪ್ರಕಾರ, 1845ರಲ್ಲಿ ಸಾಧುವೊಬ್ಬರು ಇವರ ಪೂರ್ವಜರಾದ ಬಾತಿನಿ ವೀರಣ್ಣ ಗೌಡ್ ಅವರಿಗೆ ಈ ರಹಸ್ಯ ಗಿಡಮೂಲಿಕೆ ಸೂತ್ರವನ್ನು ನೀಡಿದ್ದರು. ಸಾರ್ವಜನಿಕರಿಗೆ ಇದನ್ನು ಉಚಿತವಾಗಿ ನೀಡಬೇಕು ಎಂಬ ಷರತ್ತಿನ ಮೇರೆಗೆ ತಲೆಮಾರುಗಳಿಂದ ಈ ಸೇವೆಯನ್ನು ಉಚಿತವಾಗಿಯೇ ನಡೆಸಿಕೊಂಡು ಬರಲಾಗುತ್ತಿದೆ.
ಈ ಬಾರಿ ಯಾವುದೇ ನೂಕು ನುಗ್ಗಲು ಆಗಬಾರದು ಎಂದು ಬಾಥಿನಿ ಕುಟುಂಬ ಕಟ್ಟೆಚ್ಚರ ವಹಿಸಿದೆ. ಅದಕ್ಕಾಗಿಯೇ ಈ ಬಾರಿ 35 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಮಳೆ ಬಂದರೂ ಜನರಿಗೆ ಯಾವುದೇ ತೊಂದರೆ ಆಗದಂತೆ ಶೆಡ್ ಗಳನ್ನು ನಿರ್ಮಾಣ ಮಾಡಲಾಗಿದೆ. ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಮತ್ತು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಮೀನುಗಾರಿಕಾ ಇಲಾಖೆಯು ಗೊತ್ತುಪಡಿಸಿದ ಕೌಂಟರ್‌ಗಳಲ್ಲಿ ಸುಮಾರು 140,000 ಉತ್ತಮ ಗುಣಮಟ್ಟದ ಕೊರ್ರಮಿನು (ಮುರೆಲ್) ಮರಿಗಳನ್ನು ರೆಡಿ ಇಡಲಾಗಿದೆ. ಇದಕ್ಕಾಗಿ ಅಧಿಕಾರಿಗಳು ವಿಶೇಷ ಸಂಗ್ರಹಣಾ ಸೌಲಭ್ಯಗಳನ್ನು ಸಹ ಸ್ಥಾಪಿಸಿದ್ದಾರೆ. ಲಕ್ಷಾಂತರ ಭಕ್ತರು ಏಕಕಾಲದಲ್ಲಿ ಸೇರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕಾಲ್ತುಳಿತ ಅಥವಾ ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸರ್ಕಾರವು ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಿದೆ.
ಮೀನು ಪ್ರಸಾದ ಸ್ವೀಕರಿಸಲು ಬರುವವರ ಪ್ರಯಾಣಕ್ಕೆ ಅನುಕೂಲವಾಗುವಂತೆ, ಆರ್‌ಟಿಸಿ, ಜೆಬಿಎಸ್, ಎಂಜಿಬಿಎಸ್ ಮತ್ತು ಕಾಚೆಗುಡದಂತಹ ಸ್ಥಳಗಳಿಂದ ಉಚಿತ ಬಸ್ ಸೇವೆಗಳನ್ನು ವ್ಯವಸ್ಥೆ ಮಾಡಿದೆ. ಜಿಎಚ್‌ಎಂಸಿ, ಜಲಮಂಡಳಿ, ಕಂದಾಯ, ಪೊಲೀಸ್ ಮತ್ತು ಸಂಚಾರ ವಿಭಾಗಗಳು ಸೇರಿದಂತೆ ಹದಿನಾಲ್ಕು ಸರ್ಕಾರಿ ಇಲಾಖೆಗಳು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿವೆ.
ಕೊಲ್ಲೂರು ಮೂಕಾಂಬಿಕಾ ದರ್ಶನಕ್ಕೆ ಬಂದ ತಮಿಳುನಾಡು CM ದಳಪತಿ ವಿಜಯ್ ನೋಡಲು ಜನಸಾಗರ!