newsics.com/ನ್ಯೂಸಿಕ್ಸ್
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ರಾತ್ರೋರಾತ್ರಿ ಬೈಕ್‌ಗಳಿಂದ ಪೆಟ್ರೋಲ್ ಕದಿಯುವ ತಂಡವೊಂದು ಹುಟ್ಟಿಕೊಂಡಿದ್ದು, ಸಾರ್ವಜನಿಕರಲ್ಲಿ ಭಾರಿ ಆತಂಕ ಮೂಡಿಸಿದೆ.
ಸಾಗರ ಪೇಟೆ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲೇ ಇರುವ ಜಂಬಗಾರು ರೈಲ್ವೆ ನಿಲ್ದಾಣದ ಬಳಿ ಈ ಪೆಟ್ರೋಲ್ ಕಳ್ಳತನ ದಂಧೆ ಮಿತಿಮೀರಿದೆ. ಪ್ರತಿದಿನ ನೂರಾರು ಪ್ರಯಾಣಿಕರು ತುರ್ತು ಕೆಲಸದ ನಿಮಿತ್ತ ರೈಲ್ವೆ ನಿಲ್ದಾಣದ ಮುಂದೆ ತಮ್ಮ ಬೈಕ್‌ಗಳನ್ನು ಪಾರ್ಕ್ ಮಾಡಿ ಬೇರೆ ಊರುಗಳಿಗೆ ತೆರಳುತ್ತಾರೆ. ಆದರೆ, ಕಳ್ಳರು ಈ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ವಾಹನ ಸವಾರರು ಏನಾದರೂ ರಾತ್ರಿ ವೇಳೆ ಮರಳಿ ಬಾರದಿದ್ದರೆ, ಬೆಳಗಾಗುವುದರೊಳಗೆ ಅವರ ಬೈಕ್‌ನಲ್ಲಿನ ಇಂಧನ ಮಾಯವಾಗಿರುತ್ತದೆ! ಕೆಲಸ ಮುಗಿಸಿ ರೈಲಿನಿಂದ ಇಳಿದು ಮನೆಗೆ ಹೋಗೋಣ ಎಂದು ಬೈಕ್ ಸ್ಟಾರ್ಟ್ ಮಾಡಲು ಹೋದ ಸವಾರರು, ಪೆಟ್ರೋಲ್ ಟ್ಯಾಂಕ್ ಸಂಪೂರ್ಣ ಖಾಲಿಯಾಗಿರುವುದನ್ನು ಕಂಡು ದಿಕ್ಕೆಟ್ಟು ಹೋಗುತ್ತಿದ್ದಾರೆ. ಬೇರೆ ದಾರಿಯಿಲ್ಲದೆ ಮಧ್ಯರಾತ್ರಿಯಲ್ಲೇ ಬೈಕ್ ತಳ್ಳಿಕೊಂಡು ಸಮೀಪದ ಪೆಟ್ರೋಲ್ ಬಂಕ್‌ಗೆ ಅಲೆಯುವ ದುಸ್ಥಿತಿ ಸವಾರರಿಗೆ ಎದುರಾಗಿದೆ.
ನಾಲ್ಕೈದು ಜನರಿರುವ ಈ ಕಳ್ಳರ ತಂಡ, ಕೈಯಲ್ಲಿ ಖಾಲಿ ವಾಟರ್ ಬಾಟಲಿಗಳನ್ನು ಹಿಡಿದು ಬರುತ್ತಾರೆ. ಅತ್ಯಂತ ಚಾಣಾಕ್ಷತನದಿಂದ ಬೈಕ್‌ಗಳ ಪೆಟ್ರೋಲ್ ಪೈಪ್‌ಗಳನ್ನು ಕಿತ್ತು, ನಿಮಿಷಗಳಲ್ಲಿ ಲೀಟರ್‌ಗಟ್ಟಲೆ ಪೆಟ್ರೋಲ್ ಕದ್ದು ಪರಾರಿಯಾಗುತ್ತಾರೆ.
ಸಾಗರ ರೈಲ್ವೆ ನಿಲ್ದಾಣದಲ್ಲಿ ಪ್ರಸ್ತುತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾರಣಕ್ಕಾಗಿ ನಿಲ್ದಾಣದ ಮುಂಭಾಗದಲ್ಲಿ ಸೂಕ್ತ ಬೆಳಕಿನ (ಸ್ಟ್ರೀಟ್ ಲೈಟ್) ವ್ಯವಸ್ಥೆ ಇಲ್ಲವಾಗಿದೆ. ಇದರೊಂದಿಗೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇಲ್ಲದಿರುವುದು ಈ ಪೆಟ್ರೋಲ್ ಕಳ್ಳರಿಗೆ ವರದಾನವಾಗಿದೆ.
ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!