newsics.com/ನ್ಯೂಸಿಕ್ಸ್
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ(KPS)ಗಾಗಿ ಪ್ರತ್ಯೇಕ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ವೃಂದವನ್ನು ಸ್ಥಾಪಿಸಿದೆ. ಇದಕ್ಕಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ 2,500 ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳನ್ನು ಹೊಸದಾಗಿ ಸೃಜಿಸಿ ಪರಿವರ್ತಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಜೂನ್ 8, 2026 ರಂದು ಈ ಕುರಿತು ಅಧಿಕೃತ ಸರ್ಕಾರಿ ಆದೇಶ (ಆದೇಶ ಸಂಖ್ಯೆ: ಇಪಿ 50 ಡಿಪಿಐ 2026) ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 200 ಶಾಲೆಗಳು ಹಾಗೂ ರಾಜ್ಯದ ಇತರೆಡೆಯ 500 ಶಾಲೆಗಳು ಸೇರಿದಂತೆ ಆಯ್ದ ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಶಾಲೆಗಳಲ್ಲಿ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ.
ಪಸ್ತುತ ಅಂದಾಜು 2500 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರ ಹುದ್ದೆಗಳನ್ನು ನೀಡಬೇಕಾಗಿರುತ್ತದೆ. ನೂತನವಾಗಿ ಸೃಜಿಸಲಾಗುವ ಈ ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳಿಗೆ ರೂ. 44,425 – 83,700 ರಷ್ಟು ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
ಆರ್ಥಿಕ ಪರಿಣಾಮ: ಹುದ್ದೆಗಳ ಈ ಪರಿವರ್ತನೆಯಿಂದಾಗಿ ಸರ್ಕಾರಕ್ಕೆ ವಾರ್ಷಿಕವಾಗಿ ಒಟ್ಟು ರೂ. 1141.50 ಲಕ್ಷಗಳ (11.41 ಕೋಟಿ ರೂ.) ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಇದಕ್ಕೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.
ಈ ನೂತನ ಮಾಹಿತಿ ತಂತ್ರಜ್ಞಾನ ಶಿಕ್ಷಕರ ವೃಂದಕ್ಕೆ ಪ್ರತ್ಯೇಕವಾಗಿ ವೃಂದ ಮತ್ತು ನೇಮಕಾತಿ (C&R) ನಿಯಮಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆಹಾರ ಪಾರ್ಸೆಲ್, ಬಜ್ಜಿ-ಬೋಂಡಾ ಕಟ್ಟಲು ನ್ಯೂಸ್ ಪೇಪರ್ ಬಳಸದಂತೆ ವ್ಯಾಪಾರಿಗಳಿಗೆ FSSAI ವಾರ್ನಿಂಗ್