newsics.com
ಕಲಬುರಗಿ: ಜಯದೇವ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರಿ ಕೊಡಿಸುವುದಾಗಿ ಹೇಳಿ ಬರೋಬ್ಬರಿ 110 ಜನರಿಂದ ಹಣ ಪಡೆದು ವಂಚಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ನಗರದಲ್ಲಿ ನಿರ್ಮಾಣವಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆ ಸೆಪ್ಟೆಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರಿ ಕೊಡಿಸುವುದಾಗಿ ಐವರು 110 ಜನರಿಂದ 70 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ.
ಕಿರಾಣಿ ಅಂಗಡಿ ವ್ಯಾಪಾರಿ ಸಂತೋಷ್, ರಾಜಶೇಖರ್ ಸೇರಿದಂತೆ ಐವರನ್ನು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಕಲಬುರಗಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ.
ಕಲಬುರಗಿ ಜಯದೇವ ಆಸ್ಪತ್ರೆ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಯಾಗಲಿದೆ. ಆಸ್ಪತ್ರೆಯಲ್ಲಿ ಈಗಾಗಲೆ ಚಿಕಿತ್ಸ ನೀಡಲಾಗುತ್ತಿದೆ. 371 ಹಾಸಿಗೆಗಳ ಆಸ್ಪತ್ರೆ ಇದೇ ವರ್ಷ ಫೆಬ್ರವರಿಯಲ್ಲಿ ತನ್ನ ತಾತ್ಕಾಲಿಕ ಕಾರ್ಯ ಆರಂಭಿಸಿದೆ.