newsics.com | ನ್ಯೂಸಿಕ್ಸ್
ನವದೆಹಲಿ: 2026 ರ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಎನ್‌ಟಿಎ ಆಡಳಿತ ವೈಫಲ್ಯದ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸೂಚನೆಯಂತೆ ಕೇಂದ್ರದ ಹಿರಿಯ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಅವರು ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ.
ಪ್ರಸ್ತುತ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಜೋಶಿ ಅವರು, ತಮ್ಮ ಹಾಲಿ ಖಾತೆಗಳ ಜತೆಗೆ ಶಿಕ್ಷಣ ಸಚಿವಾಲಯವನ್ನೂ ಮುನ್ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಂಬಿಕೆಯನ್ನುಳಿಸಿಕೊಂಡು ದೇಶದ ಶಿಕ್ಷಣ ವಲಯವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುವುದಾಗಿ ಅಧಿಕಾರ ವಹಿಸಿಕೊಂಡ ನಂತರ ಜೋಶಿ ಅವರು ಭರವಸೆ ನೀಡಿದ್ದಾರೆ.
ನವೆಂಬರ್ 27, 1962 ರಂದು ವಿಜಯಪುರದಲ್ಲಿ ಜನಿಸಿದ ಪ್ರಹ್ಲಾದ್ ಜೋಶಿ ಅವರ ತಂದೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರು. ಹುಬ್ಬಳ್ಳಿಯ ರೈಲ್ವೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ ಅವರು, ಹುಬ್ಬಳ್ಳಿಯ ಕೆ.ಎಸ್. ಆರ್ಟ್ಸ್ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ (ಬಿ.ಎ.) ಪಡೆದಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜೊತೆ ಗುರುತಿಸಿಕೊಂಡಿದ್ದ ಜೋಶಿ ಅವರು, ನಂತರ ಕರ್ನಾಟಕ ರಾಜ್ಯ ಬಿಜೆಪಿಯ ಪ್ರಮುಖ ಸಂಘಟಕರಾಗಿ ಬೆಳೆದರು.
2004 ರಿಂದ ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾಗಿ ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿ, ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ಹಲವು ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ.