newsics.com | ನ್ಯೂಸಿಕ್ಸ್
ಹೈದರಾಬಾದ್: ಸ್ವಿಟ್ಜರ್‌ಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದ ಹೈದರಾಬಾದ್‌ನ ದಂಪತಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಈಗ ಭಾರೀ ಆರ್ಥಿಕ ಹಗರಣದ ತಿರುವು ಪಡೆದುಕೊಂಡಿದೆ.
ಕಣ್ಮರೆಯಾಗಿರುವ ದಂಪತಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ಎಸ್ಕೇಪ್ ಆಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ಪ್ರಕರಣ ಈಗ ಜನರನ್ನು ಬೆಚ್ಚಿಬೀಳಿಸಿದೆ.
ನಿಗೂಢ ಕಣ್ಮರೆ
ಹೈದರಾಬಾದ್‌ನ ಚರ್ಲಪಲ್ಲಿ ನಿವಾಸಿಗಳಾದ ಪಬ್ಬಾ ಚಂದ್ರಶೇಖರ್ (51) ಮತ್ತು ಅವರ ಪತ್ನಿ ಸ್ವಪ್ನಾ (42) ಕಳೆದ ತಿಂಗಳು ಜೂನ್ 22 ರಂದು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರವಾಸ ಕೈಗೊಂಡಿದ್ದರು. ಆರಂಭದಲ್ಲಿ ಮಗಳೊಂದಿಗೆ ಸಂಪರ್ಕದಲ್ಲಿದ್ದ ದಂಪತಿ, ನಂತರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಮಗಳು ಶ್ರೇಯಾ, ಚರ್ಲಪಲ್ಲಿ ಪೊಲೀಸ್ ಠಾಣೆಯಲ್ಲಿ ಪೋಷಕರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಪ್ರವಾಸದ ಹೆಸರಲ್ಲಿ 50 ಕೋಟಿ ರೂ. ವಂಚನೆ?
ದಂಪತಿ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ, ಇತ್ತ ಕುಶಾಯಿಗುಡದಲ್ಲಿರುವ ಅವರ ಮನೆ ಮುಂದೆ ಹೂಡಿಕೆದಾರರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಚಂದ್ರಶೇಖರ್ ಕಳೆದ 30 ವರ್ಷಗಳಿಂದ ‘ಶ್ರೀ ವೆಂಕಟೇಶ್ವರ ಮಾರ್ಕೆಟಿಂಗ್’ ಎಂಬ ಸಿಮೆಂಟ್ ಫೈನಾನ್ಸ್ ಮತ್ತು ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಸ್ವಿಟ್ಜರ್‌ಲ್ಯಾಂಡ್‌ಗೆ ಹೊರಡುವ ಮುನ್ನ ಅವರು ಮಗಳ ಮದುವೆ ಹಾಗೂ ಕುಟುಂಬದ ತುರ್ತು ಪರಿಸ್ಥಿತಿಯ ನೆಪ ಹೇಳಿ ಸುಮಾರು 70 ಕ್ಕೂ ಹೆಚ್ಚು ಜನರಿಂದ ಬರೋಬ್ಬರಿ 50 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಾಲ ಹಾಗೂ ಹೂಡಿಕೆಯ ರೂಪದಲ್ಲಿ ಪಡೆದಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು
ವಿಷಯ ತಿಳಿಯುತ್ತಿದ್ದಂತೆ ಮಲ್ಕಾಜ್‌ಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಂಪತಿಯ ಬ್ಯಾಂಕ್ ಖಾತೆಗಳು, ವ್ಯವಹಾರದ ದಾಖಲೆಗಳು ಮತ್ತು ಇಮಿಗ್ರೇಷನ್ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಇದು ಕೇವಲ ನಾಪತ್ತೆ ಪ್ರಕರಣವೇ ಅಥವಾ ಸಾಲಗಾರರಿಂದ ತಪ್ಪಿಸಿಕೊಳ್ಳಲು ದಂಪತಿ ಮುಂಚಿತವಾಗಿಯೇ ಯೋಜಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆಯೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ. ಅಗತ್ಯ ಬಿದ್ದರೆ ಸ್ವಿಟ್ಜರ್‌ಲ್ಯಾಂಡ್ ರಾಯಭಾರ ಕಚೇರಿಯ ಸಹಾಯ ಪಡೆದು ದಂಪತಿಯ ಪತ್ತೆಗೆ ಮುಂದಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.
AI ಜಮಾನಾದಲ್ಲೂ ಬದಲಾಗದ ಪಠ್ಯಕ್ರಮ: ಕೆಲಸ ಸಿಗದೆ ಟೆಕ್ಕಿಗಳ ಪರದಾಟ! ವೈರಲ್ ಆಯ್ತು ಉದ್ಯಮಿಯ ಪೋಸ್ಟ್
Crime Case ಪೋಕ್ಸೋ ಕೇಸ್ ದಾಖಲಿಸಿದ್ದಕ್ಕೆ ಒಂದೇ ಕುಟುಂಬದ ಆರು ಜನರ ಸಾಮೂಹಿಕ ಕೊ*ಲೆ