newsics. com| ನ್ಯೂಸಿಕ್ಸ್
ಬೆಂಗಳೂರು: ದೇಶದ ಸಿಲಿಕಾನ್ ಸಿಟಿಯಲ್ಲಿ ಕೈತುಂಬಾ ಸಂಬಳ ಪಡೆಯುವ ಐಟಿ ಉದ್ಯೋಗಿಗಳಿಗೆ ನಿಜಕ್ಕೂ ಆ ಹಣ ಸಾಕಾಗುತ್ತಿದೆಯೇ? ಅಥವಾ ಮಿತಿಮೀರಿದ ಆಸೆಗಳು ಆದಾಯವನ್ನು ನುಂಗಿ ಹಾಕುತ್ತಿವೆಯೇ? ಇಂತಹದೊಂದು ಗಂಭೀರ ಚರ್ಚೆಗೆ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಸಂದರ್ಶನದ ವಿಡಿಯೋವೊಂದು ಸಾಕ್ಷಿಯಾಗಿದೆ. ಮ್ಯೂಚುವಲ್ ಫಂಡ್ ಸಲಹೆಗಾರ ಅಂಶುಮಾನ್ ಶರ್ಮಾ ಅವರು ಮಾಡಿದ್ದ ಹಳೆಯ ಸಂದರ್ಶನದ ತುಣುಕೊಂದು ಸದ್ಯ ಎಕ್ಸ್ (ಟ್ವಿಟರ್) ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಮೆಟ್ರೋ ನಗರಗಳ ದುಬಾರಿ ಜೀವನ ಮತ್ತು ‘ಜೀವನಶೈಲಿ ಹಣದುಬ್ಬರ’ದ (Lifestyle Inflation) ನೈಜ ಚಿತ್ರಣವನ್ನು ಬಿಚ್ಚಿಟ್ಟಿದೆ.
ವಾರ್ಷಿಕ ₹45 ಲಕ್ಷದ ಬೃಹತ್ ಪ್ಯಾಕೇಜ್ ಹೊಂದಿದ್ದರೂ ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಒಂದು ರೂಪಾಯಿಯೂ ಇರುವುದಿಲ್ಲ ಎಂದು ಐಟಿ ಉದ್ಯೋಗಿ ಹೇಳಿರುವ ಮಾತುಗಳು ಈಗ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
2.45 ಲಕ್ಷ ಕೈಗೆ ಬಂದ್ರೂ ನಯಾಪೈಸೆ ಉಳಿಯಲ್ಲ!
ಸಂದರ್ಶನದಲ್ಲಿ ತಮ್ಮನ್ನು ‘ಸೂರ್ಯ’ ಎಂದು ಪರಿಚಯಿಸಿಕೊಂಡಿರುವ 14 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿರುವ ಸಾಫ್ಟ್‌ವೇರ್ ಕನ್ಸಲ್ಟೆಂಟ್, ತೆರಿಗೆ ಕಡಿತದ ನಂತರ ಪ್ರತಿ ತಿಂಗಳು ₹2.45 ಲಕ್ಷ ನಿವ್ವಳ ಸಂಬಳ (Take-home salary) ಪಡೆಯುತ್ತಾರೆ. ಸಾಮಾನ್ಯ ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ಮೊತ್ತವಾಗಿ ಕಂಡರೂ, ತಮಗೆ ಮಾತ್ರ ಉಳಿತಾಯ ಮಾಡುವುದು ಮರೀಚಿಕೆಯಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಮದುವೆಯಾಗಿ ಮಗು ಆದ ನಂತರ ಜವಾಬ್ದಾರಿಗಳು ಹೆಚ್ಚಾಗಿದ್ದು, ತಿಂಗಳ ಕೊನೆಗೆ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಉಳಿಯುತ್ತಿದೆ ಎನ್ನುತ್ತಾರೆ ಸೂರ್ಯ.
ತಮ್ಮ ಆದಾಯದ ವಿವರವನ್ನು ಅವರೇ ಹಂಚಿಕೊಂಡಿದ್ದಾರೆ.
- ಹೋಮ್ ಲೋನ್ ಇಎಂಐ (Home Loan EMI): ₹63,000
- ಮಗನ ಶಾಲಾ ಶುಲ್ಕ (3.5 ವರ್ಷದ ಮಗು): ₹11,000
- ಆಹಾರ ಮತ್ತು ದಿನಸಿ ಸಾಮಗ್ರಿಗಳು: ₹12,000
- ಇತರ ಅತ್ಯಗತ್ಯ ವೆಚ್ಚಗಳು: ₹20,000
- ಶಾಪಿಂಗ್, ಪ್ರವಾಸ ಮತ್ತು ರೆಸ್ಟೋರೆಂಟ್ ಊಟ: ₹32,000
ಇಲ್ಲಿ ಮನೆ ಮತ್ತು ಮಗನ ಶಿಕ್ಷಣದ ವೆಚ್ಚದ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ ಕೇವಲ ಐಷಾರಾಮಿ ಹವ್ಯಾಸಗಳು, ಹೋಟೆಲ್ ಊಟ ಮತ್ತು ಶಾಪಿಂಗ್‌ಗೆಂದೇ ಪ್ರತಿ ತಿಂಗಳು ಖರ್ಚು ಮಾಡುತ್ತಿರುವ ₹32,000 ಹಣವೇ ಈಗ ನೆಟ್ಟಿಗರ ಕಣ್ಣು ಕೆಂಪಾಗಲು ಪ್ರಮುಖ ಕಾರಣವಾಗಿದೆ.
ಇನ್ನು, ಈ ವಿಡಿಯೋವನ್ನು ಮರುಹಂಚಿಕೊಂಡಿರುವ ಅನಾಮಧೇಯ ಎಕ್ಸ್ ಖಾತೆಯೊಂದು, “ಇದು ದೇಶದ ಹಣದುಬ್ಬರವಲ್ಲ, ಬದಲಿಗೆ ಕಳಪೆ ಹಣಕಾಸು ಯೋಜನೆಗೆ (Poor Financial Planning) ಸಾಕ್ಷಿ” ಎಂದು ಟೀಕಿಸಿದೆ. ಆದಾಯಕ್ಕೆ ತಕ್ಕಂತೆ ಸರಿಯಾದ ಬಜೆಟ್ ರೂಪಿಸಿಕೊಳ್ಳದ ಕಾರಣ ಈ ಪರಿಸ್ಥಿತಿ ಬಂದಿದೆ ಎಂದು ವಾದಿಸಿದೆ.
ಆದರೆ ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಲೆ ಎದ್ದಿದೆ. ಒಂದು ವರ್ಗದ ಜನರು ಸಂಬಳ ಹೆಚ್ಚಾದಂತೆಲ್ಲಾ ಮನುಷ್ಯನ ದುಂದುವೆಚ್ಚಗಳೂ ಹೆಚ್ಚಾಗುತ್ತವೆ, ಇದು ಆರ್ಥಿಕ ಶಿಸ್ತಿನ ಕೊರತೆ ಎಂದು ಕಿಡಿಕಾರಿದ್ದಾರೆ.
ಮತ್ತೊಂದು ವರ್ಗದ ಜನರು ಐಟಿ ಉದ್ಯೋಗಿಯ ಬೆಂಬಲಕ್ಕೆ ನಿಂತಿದ್ದು, ದುಡಿದ ಹಣದಲ್ಲಿ ಕುಟುಂಬದೊಂದಿಗೆ ಆರಾಮವಾಗಿ ಬದುಕುವುದು ತಪ್ಪು ಹೇಗೆ? ಅವರು ಈಗಾಗಲೇ ಮನೆ ಮತ್ತು ಮಗನ ಶಿಕ್ಷಣಕ್ಕೆ ದೊಡ್ಡ ಹೂಡಿಕೆ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಈ ಚರ್ಚೆಯು ಕೇವಲ ಒಬ್ಬ ವ್ಯಕ್ತಿಯ ಬಜೆಟ್‌ಗೆ ಸೀಮಿತವಾಗಿರದೆ, ಇಂದಿನ ಆಧುನಿಕ ಮಹಾನಗರಗಳಲ್ಲಿ ಆದಾಯ ಹೆಚ್ಚಿದಂತೆಲ್ಲಾ ಜೀವನದ ವೆಚ್ಚಗಳೂ ಅಷ್ಟೇ ವೇಗವಾಗಿ ಬೆಳೆಯುತ್ತಿರುವ ಹೊಸ ಅರ್ಥಶಾಸ್ತ್ರದ ಬಿಕ್ಕಟ್ಟನ್ನು ಎತ್ತಿ ತೋರಿಸಿದೆ.
Rice expensice ಅಕ್ಕಿ ದರ ಮತ್ತೆ ಭಾರೀ ಹೆಚ್ಚಳ: ಕೆಜಿಗೆ 13 ರೂ. ಏರಿಕೆ