newsics.com/ನ್ಯೂಸಿಕ್ಸ್
ನವದೆಹಲಿ: ರಸ್ತೆ ಬದಿಯಲ್ಲಿ ನಿಂತಿದ್ದ ಆಟೋರಿಕ್ಷಾದ ಮೇಲೆ ಮರ ಅಥವಾ ಅದರ ಕೊಂಬೆ ಬಿದ್ದರೆ, ಅದನ್ನು ಮೋಟಾರು ವಾಹನ ಕಾಯ್ದೆಯಡಿ ‘ಮೋಟಾರು ಅಪಘಾತ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಈ ರೀತಿಯ ಅಪಘಾತಗಳು ಮೋಟಾರು ವಾಹನದಿಂದಲೇ ನೇರವಾಗಿ ಸಂಭವಿಸದ ಕಾರಣ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 166 ರ ಅಡಿಯಲ್ಲಿ ಪರಿಹಾರದ ಕ್ಲೈಮ್ ಮಾಡುವುದು ಸೂಕ್ತವಲ್ಲ ಎಂದು ಹೇಳಿದೆ.
2007ರಲ್ಲಿ ಬೆಂಗಳೂರಿನಲ್ಲಿ ನಡೆದ ಈ ವಿಲಕ್ಷಣ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರಯಾಣಿಕ ಕೆ.ಕೆ. ಉಮೇಶ್ ಕುಮಾರ್ ಅವರಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಜೂನ್ 23, 2007 ರಂದು ಉಮೇಶ್ ಕುಮಾರ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಭಾರಿ ಮಳೆ ಬಂದಿದ್ದರಿಂದ ಆಟೋ ಚಾಲಕ ರಸ್ತೆ ಬದಿಯ ಮರದ ಕೆಳಗೆ ಆಟೋ ನಿಲ್ಲಿಸಿದ್ದರು. ಆಗ ಹಳೆಯ ಮರದ ಕೊಂಬೆಯೊಂದು ಹಠಾತ್ತನೆ ಮುರಿದು ಆಟೋದ ಮೇಲೆ ಬಿದ್ದ ಪರಿಣಾಮ ಉಮೇಶ್ ತೀವ್ರವಾಗಿ ಗಾಯಗೊಂಡಿದ್ದರು.
ಈ ಹಿಂದೆ ಬೆಂಗಳೂರಿನ ಮೋಟಾರು ಅಪಘಾತ ದಾವೆಗಳ ನ್ಯಾಯಮಂಡಳಿಯು ಇದನ್ನು ‘ನೈಸರ್ಗಿಕ ವಿಕೋಪ’ ಎಂದು ಕರೆದು, ಉಮೇಶ್ ಸಲ್ಲಿಸಿದ್ದ 50 ಲಕ್ಷ ರೂ. ಪರಿಹಾರದ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ, ಇದರ ವಿರುದ್ಧ ಮೇಲ್ಮನವಿ ಸಲ್ಲಿಕೆಯಾದಾಗ ಕರ್ನಾಟಕ ಹೈಕೋರ್ಟ್ 17.10 ಲಕ್ಷ ರೂ. ಪರಿಹಾರವನ್ನು ನೀಡಿತ್ತು.
ಇದರಲ್ಲಿ ಬಿಬಿಎಂಪಿ ಶೇ. 25, ಆಟೋ ವಿಮಾ ಕಂಪನಿ ಶೇ. 50 ಮತ್ತು ತೋಟಗಾರಿಕಾ ಇಲಾಖೆ ಶೇ. 25 ರಷ್ಟು ಪರಿಹಾರ ಹಂಚಿಕೊಳ್ಳಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಿಬಿಎಂಪಿ ಮತ್ತು ತೋಟಗಾರಿಕಾ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಶಿಗೆಲ್ಲೋಸಿಸ್ ಸೋಂಕಿನ ಭೀತಿ: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೈಅಲರ್ಟ್