newsics.com/ನ್ಯೂಸಿಕ್ಸ್
ವಿವಿಧ ಜಾತಿಯ, ಸಕ್ಕರಯಂತೆ ಸಿಹಿ ಇರುವ ಮಾವಿನ ಹಣ್ಣುಗಳ ತಿಂದವನೇ ಬಲ್ಲ ಅದರ ರುಚಿಯನ್ನು. ಕೆಂಪು, ಹಳದಿ, ಕೆಂಪು ಮಿಶ್ರಿತ ಹಳದಿ ಹೀಗೆ ಕಣ್ಣುಕುಕ್ಕುವ ಬಣ್ಣಗಳಿಂದ ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿನಲ್ಲಿ ಸಾಕಷ್ಟು ಬಗೆಯ ವಿಟಮಿನ್‌ಗಳು ಅಡಕವಾಗಿದೆ.
ಮಾವಿನ ಹಣ್ಣಿನಲ್ಲಿ ಹೇರಳವಾದ ಫೈಬರ್ ಅಂಶವಿದೆ. ಅದೇ ರೀತಿ ವಿಟಮಿನ್ ಎ, ಬಿ, ಸಿ, ಕೆ, ಇ ಗಳಿದೆ. ಆರೋಗ್ಯವನ್ನು ಉತ್ತಮಗೊಳಿಸುವ ಹಣ್ಣಾದ ಇದು ಪರಿಪೂರ್ಣ ಹಣ್ಣು ಎಂದೇ ಹೇಳಬಹುದು. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಈ ಮಾತು ಮಾವಿನ ಹಣ್ಣಿಗೂ ಅನ್ವಯವಾಗುತ್ತದೆ. ಮಾವಿನಹಣ್ಣು ಎಷ್ಟು ರುಚಿಯೋ ಅಷ್ಟೇ ಅಧಿಕ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆ
ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ದಿಢೀರ್ ಎಂದು ಹೆಚ್ಚಾಗುತ್ತದೆ. ವಿಶೇಷವಾಗಿ ಮಧುಮೇಹ ಅಥವಾ ಡಯಾಬಿಟಿಸ್ ಇರುವವರು ಮಾವಿನ ಹಣ್ಣನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದು ಅತ್ಯಗತ್ಯ. ಇಲ್ಲದಿದ್ದರೆ ಸಕ್ಕರೆ ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.
ತೂಕ ಹೆಚ್ಚಾಗುವ ಭೀತಿ
ಮಾವಿನ ಹಣ್ಣಿನಲ್ಲಿ ಕ್ಯಾಲೊರಿಗಳ ಪ್ರಮಾಣ ಅಧಿಕವಾಗಿದೆ. ಮಧ್ಯಮ ಗಾತ್ರದ ಒಂದು ಮಾವಿನ ಹಣ್ಣಿನಲ್ಲಿ ಸುಮಾರು ನೂರೈವತ್ತರಿಂದ ಇನ್ನೂರು ಕ್ಯಾಲೊರಿ ಇರುತ್ತದೆ. ಯಾರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೋ, ಅವರು ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ಅವರ ತೂಕ ಇಳಿಕೆಯ ಜರ್ನಿಗೆ ಹಿನ್ನಡೆಯಾಗಬಹುದು ಮತ್ತು ದೇಹದ ತೂಕ ವೇಗವಾಗಿ ಹೆಚ್ಚಾಗಬಹುದು.
ಜೀರ್ಣಕ್ರಿಯೆಯ ಸಮಸ್ಯೆಗಳು
ಮಾವಿನ ಹಣ್ಣಿನಲ್ಲಿ ನಾರಿನಂಶ ಇರುವುದು ಒಳ್ಳೆಯದೇ ಆದರೂ, ಅದನ್ನು ಅತಿಯಾಗಿ ತಿಂದಾಗ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತದೆ. ಅತಿಯಾದ ಸೇವನೆಯಿಂದ ಹೊಟ್ಟೆ ಉಬ್ಬರ, ಗ್ಯಾಸ್, ಹೊಟ್ಟೆ ನೋವು ಮತ್ತು ಭೇದಿಯಂತಹ (ಡಯಾರಿಯಾ) ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ದೇಹದಲ್ಲಿ ಉಷ್ಣತೆ ಹೆಚ್ಚಳ
ಆಯುರ್ವೇದದ ಪ್ರಕಾರ ಮಾವಿನ ಹಣ್ಣು ದೇಹದಲ್ಲಿ ಉಷ್ಣತೆಯನ್ನು ಅಂದರೆ ಶಾಖವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿ ಈಗಾಗಲೇ ವಾತಾವರಣದಲ್ಲಿ ಶಾಖ ಹೆಚ್ಚಿರುವುದರಿಂದ, ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ದೇಹದ ಉಷ್ಣತೆ ಮತ್ತಷ್ಟು ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು, ಹೀಟ್ ರಾಶಸ್ ಅಥವಾ ಚರ್ಮದ ಅಲರ್ಜಿಗಳು ಕಾಣಿಸಿಕೊಳ್ಳಬಹುದು.
ಹಾಗಾಗಿ, ಮಾವಿನ ಹಣ್ಣಿನ ಸಂಪೂರ್ಣ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಲು ಮತ್ತು ಆರೋಗ್ಯವಾಗಿರಲು ದಿನಕ್ಕೆ ಒಂದರಿಂದ ಎರಡು ಮೀಡಿಯಂ ಗಾತ್ರದ ಹಣ್ಣುಗಳನ್ನು ತಿನ್ನುವುದು ಸೂಕ್ತ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.