ಟಿವಿಕೆ ಸಂಸ್ಥಾಪಕ ಸಿ. ಜೋಸೆಫ್ ವಿಜಯ್ ಅವರು ರವಿವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ಟಿವಿಕೆಯ ಪ್ರಮುಖ ಶಾಸಕರಾದ ಎನ್. ಆನಂದ್, ಆಧವ್ ಅರ್ಜುನ ಹಾಗೂ ಸೆಂಗೋಟ್ಟೈಯನ್ ಸೇರಿದಂತೆ 9 ಮಂದಿ ಸಚಿವರೂ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಮತ್ತು ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕ್ಯಾಮೆರಾ ವಿಜಯ್ ಅವರತ್ತ ತಿರುಗಿದ ಪ್ರತಿಸಾರಿ ಕ್ರೀಡಾಂಗಣದಲ್ಲಿ ಘೋಷಣೆಗಳು ಮೊಳಗಿದವು. ವಿಜಯ್ ಪ್ರಮಾಣ ವಚನ ಸ್ವೀಕರಿಸಲು ಎದ್ದಾಗ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿತ್ತು.
ರಾಜ್ಯಪಾಲರು ಪ್ರಮಾಣ ವಚನ ಬೋಧನೆ ಆರಂಭಿಸಿದ ಬಳಿಕ ವಿಜಯ್ ಅವರು ಯಾವುದೇ ಪ್ರತಿಯನ್ನು ನೋಡದೆ ತಮಿಳಿನಲ್ಲಿ ಆತ್ಮವಿಶ್ವಾಸದಿಂದ ಗಟ್ಟಿ ದನಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. “ಭಾರತ ಸಂವಿಧಾನಕ್ಕೆ ನಿಷ್ಠೆ ಮತ್ತು ಅಚಲ ವಿಶ್ವಾಸ ಹೊಂದಿರುತ್ತೇನೆ. ಭಾರತದ ಸಾರ್ವಭೌಮತ್ವ ಮತ್ತು ಏಕತೆಯನ್ನು ಕಾಪಾಡುತ್ತೇನೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಭಯ, ಪಕ್ಷಪಾತ ಅಥವಾ ವೈಯಕ್ತಿಕ ಇಷ್ಟ-ಅನಿಷ್ಟಗಳಿಗೆ ಒಳಗಾಗದೆ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುತ್ತೇನೆ” ಎಂದು ಅವರು ಪ್ರಮಾಣ ಮಾಡಿದರು.
ಆ ವೇಳೆ ಮಧ್ಯಪ್ರವೇಶಿಸಿದ ರಾಜ್ಯಪಾಲರು ವಿಜಯ್ ಅವರನ್ನು ತಡೆದರು. ಅಧಿಕಾರಿಯೊಬ್ಬರು ಮುದ್ರಿತ ಪ್ರತಿ ಓದುವಂತೆ ಹೇಳಿದರು. ಆಗ ವಿಜಯ್ ಅವರು ಮುದ್ರಿತ ಪ್ರಮಾಣ ಓದಿದರು.
ಪ್ರಮಾಣ ವಚನದ ಬಳಿಕ ಮಾತನಾಡಿದ ವಿಜಯ್, ತಮ್ಮ ಸರ್ಕಾರ “ನಿಜವಾದ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯ”ದ ತತ್ವಗಳ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜನಪರ ನೀತಿಗಳಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
2026ರ ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿದ್ದ ಟಿವಿಕೆ, ಸರ್ಕಾರ ರಚನೆಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಸಿಪಿಐ, ಸಿಪಿಐ (ಎಂ), ಐಯುಎಂಎಲ್ ಹಾಗೂ ವಿಸಿಕೆ ಪಕ್ಷಗಳು ಬಾಹ್ಯ ಬೆಂಬಲ ನೀಡಲು ಒಪ್ಪಿಕೊಂಡಿವೆ.