newsics.com/ನ್ಯೂಸಿಕ್ಸ್
ಸಣ್ಣ ಮಕ್ಕಳ ಹೊಟ್ಟೆಯಲ್ಲಿ ಹುಳುಗಳು ಕಾಣಿಸುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಸ್ವಚ್ಛತೆ, ಕೈ ತೊಳೆಯದೇ ಊಟ ಮಾಡುವುದು ಹಾಗೂ ಮಣ್ಣು ಅಥವಾ ಕಲುಷಿತ ವಸ್ತುಗಳ ಸಂಪರ್ಕದಿಂದ ಈ ಸಮಸ್ಯೆ ಹೆಚ್ಚಾಗುತ್ತದೆ. ತಜ್ಞರ ಪ್ರಕಾರ, ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಇಂತಹ ಸೋಂಕಿಗೆ ಬೇಗ ಒಳಗಾಗುವ ಸಾಧ್ಯತೆ ಇರುತ್ತದೆ. ಹೊರಗೆ ಆಟವಾಡುವಾಗ ಮಣ್ಣನ್ನು ಮುಟ್ಟುವುದು, ಕಲುಷಿತ ಆಹಾರ ಸೇವಿಸುವುದು ಅಥವಾ ಕೈಗಳನ್ನು ಬಾಯಿಗೆ ಹಾಕುವ ಅಭ್ಯಾಸದಿಂದ ಹುಳುಗಳ ಸೋಂಕು ಉಂಟಾಗಬಹುದು. ಹಾಗಾದರೆ ಈ ರೀತಿಯಾದಾಗ ಯಾವ ರೀತಿಯ ಲಕ್ಷಣ ಕಂಡುಬರುತ್ತದೆ, ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಜಂತುಹುಳುವಿನ ಸಮಸ್ಯೆ ಹೆಚ್ಚಾದಾಗ ಕಂಡುಬರುವ ಲಕ್ಷಣಗಳು:
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಹೊಟ್ಟೆಯಲ್ಲಿ ಹುಳುಗಳಿದ್ದರೆ ಮಕ್ಕಳಲ್ಲಿ ಹಲವು ರೀತಿಯ ಲಕ್ಷಣಗಳು ಕಾಣಿಸಬಹುದು. ಪದೇಪದೇ ಹೊಟ್ಟೆನೋವು, ಹಸಿವು ಕಡಿಮೆಯಾಗುವುದು ಅಥವಾ ಅತಿಯಾಗಿ ಹಸಿವು ಕಾಣಿಸುವುದು ಪ್ರಮುಖ ಲಕ್ಷಣಗಳಾಗಿವೆ. ಇದರ ಜೊತೆಗೆ ದೌರ್ಬಲ್ಯ, ಬೇಗ ದಣಿವಾಗುವುದು, ಹೊಟ್ಟೆ ಉಬ್ಬುವುದು, ತೂಕ ಕಡಿಮೆಯಾಗುವುದು, ವಾಂತಿ ಸೇರಿದಂತೆ ನಾನಾ ರೀತಿಯ ಸಮಸ್ಯೆ ಕಾಣಿಸಬಹುದು. ಕೆಲ ಮಕ್ಕಳಲ್ಲಿ ರಾತ್ರಿ ಸಮಯದಲ್ಲಿ ಗುದದ ಸುತ್ತ ತೀವ್ರ ತುರಿಕೆ ಉಂಟಾಗುವುದು ಸಹ ಸಾಮಾನ್ಯ ಲಕ್ಷಣವಾಗಿದೆ. ಇಂತಹ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ತಜ್ಞರು ತಿಳಿಸಿದ್ದಾರೆ.
ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?
ಮಕ್ಕಳಿಗೆ ಊಟಕ್ಕೂ ಮೊದಲು ಮತ್ತು ಹೊರಗಿನಿಂದ ಮನೆಗೆ ಬಂದ ನಂತರ ಕೈ ತೊಳೆಯುವ ಅಭ್ಯಾಸ ಮಾಡಿಸಬೇಕು. ಶುದ್ಧ ಮತ್ತು ತಾಜಾ ಆಹಾರ ನೀಡುವುದು ಅಗತ್ಯ. ಜೊತೆಗೆ ಮಕ್ಕಳು ಮಣ್ಣು ಅಥವಾ ಅಶುದ್ಧ ವಸ್ತುಗಳನ್ನು ಬಾಯಿಗೆ ಹಾಕದಂತೆ ಗಮನಿಸುವುದು ಮುಖ್ಯ. ವೈದ್ಯರ ಸಲಹೆಯಂತೆ ಸಮಯಕ್ಕೊಮ್ಮೆ ಡಿವೋರ್ಮಿಂಗ್ ಔಷಧಿ ನೀಡುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು. ಮಕ್ಕಳಲ್ಲಿ ತೀವ್ರ ಹೊಟ್ಟೆನೋವು, ತೂಕ ಇಳಿಕೆ ಅಥವಾ ನಿರಂತರ ವಾಂತಿ ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.