ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಇದೀಗ ಚೊಚ್ಚಲ ಚುನಾವಣೆ ಗೆದ್ದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಗೆಲುವಿನ ವಿಜಯ ಮಾಲೆ ಧರಿಸಿರುವ ಟಿವಿಕೆ ಮುಖ್ಯಸ್ಥ, ಇಂದು (ಮೇ.05) ಸರ್ಕಾರ ರಚಿಸುವ ಸಲುವಾಗಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಪತ್ರದ ಮೂಲಕ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ.
ರಾಜಭವನಕ್ಕೆ ನೀಡಿದ ಪತ್ರದಲ್ಲಿ, 108 ಸ್ಥಾನಗಳನ್ನು ಗಳಿಸಿರುವ ತಮ್ಮ ಪಕ್ಷವು ಅತಿದೊಡ್ಡ ಗೆಲುವು ಕಂಡಿದೆ ಮತ್ತು ನಾವು ವಿಧಾನಸಭೆಯಲ್ಲಿ ಬಹುಮತದ ಬೆಂಬಲವನ್ನು ಪ್ರದರ್ಶಿಸಲು ಎರಡು ವಾರಗಳ ಕಾಲಾವಕಾಶ ಬೇಕಿದೆ. ಸದ್ಯದ ಮಟ್ಟಿಗೆ ಟಿವಿಕೆಗೆ 108 ಶಾಸಕರ ಬೆಂಬಲವಿದೆ. 15 ದಿನಗಳ ಸಮಯ ಸಿಕ್ಕರೆ, ಸದನದಲ್ಲಿ ಬಹುಮತವನ್ನು ಸಾಬೀತುಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ಸರ್ಕಾರ ರಚಿಸಲು ಈಗಾಗಲೇ ರಾಜ್ಯಪಾಲರಿಗೆ ಪತ್ರ ಕಳುಹಿಸಿರುವ ವಿಜಯ್, ತಮ್ಮ ಪಕ್ಷದೊಂದಿಗೆ ಸಭೆಯನ್ನು ನಡೆಸಿದ್ದಾರೆ. ಮತ್ತೊಂದೆಡೆ, ರಾಜ್ಯಪಾಲರು ಶೀಘ್ರದಲ್ಲೇ ವಿಜಯ್ ಅವರನ್ನು ಭೇಟಿ ಆಗುವ ಸಾಧ್ಯತೆಯಿದೆ ಮತ್ತು ಪಕ್ಷಕ್ಕೆ ಇನ್ನೂ ಸ್ಪಷ್ಟ ಬಹುಮತವಿಲ್ಲದ ಕಾರಣ ಬಹುಮತ ಸಾಬೀತುಪಡಿಸಲು ಕಾಲಾವಕಾಶ ನೀಡಬಹುದು ಎನ್ನಲಾಗಿದೆ.
ಈಗ ತಮಿಳುನಾಡಿನ ಜನತೆಯ ಜೊತೆಗೆ ಹಲವರ ಚಿತ್ತ ಮೂಡಿರುವುದು ಯಾವ ಪಕ್ಷದ ಜೊತೆ ವಿಜಯ್ ಬಹುಮತ ಸಾಬೀತುಪಡಿಸಲು ಕೈಜೋಡಿಸಲಿದ್ದಾರೆ? ಯಾರಿಗೆ ಅಸ್ತು ಎನ್ನುತ್ತಾರೆ? ಯಾರೆಲ್ಲ ದಿಗ್ಗಜರ ಪಾರ್ಟಿಯಿಂದ ಹೊರಬಂದು ದಳಪತಿ ಜೊತೆಗೆ ಹೆಜ್ಜೆ ಹಾಕಲಿದ್ದಾರೆ? ಎಂಬ ಕುತೂಹಲ ಜನರಲ್ಲಿ ತೀವ್ರವಾಗಿ ಕಾಡಲಾರಂಭಿಸಿದೆ.
ಮನವಿhttps://www.newsics.com/2026/05/06/what-will-happen-if-mamata-does-not-resign-as-cm/