newsics.com/ನ್ಯೂಸಿಕ್ಸ್
ಇನ್ನೂ ಕೂಡ ಬಹಳಷ್ಟು ಜನರು ಗಂಡು ಮಗು ಬೇಕು. ಹೆಣ್ಣಾದರೆ ಆ ಮಗುವೇ ಬೇಡ ಎಂಬ ಮೌಢ್ಯದಲ್ಲೇ ಇದ್ದಾರೆ. ಹುಟ್ಟುವ ಮೊದಲೇ ಯಾವ ಮಗುವೆಂದು ಗುರುತಿಸಿ ಗರ್ಭಪಾತ ಮಾಡಿಸುವ ಕ್ರೂರಿಗಳೂ ಇದ್ದಾರೆ. ಇದರ ನಡುವೆಯೂ ದೇಶದಲ್ಲಿ ಲಿಂಗಾನುಪಾತ ಸುಧಾರಿಸುತ್ತಿದೆ.
ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ಬುಧವಾರದಂದು “Women and Men in India 2025: Selected Indicators and Data” ಎಂಬ 27ನೇ ಆವೃತ್ತಿಯ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ದೇಶದಲ್ಲಿ ಜನನ ಸಮಯದಲ್ಲಿ ಲಿಂಗ ಅನುಪಾತ ಗಣನೀಯವಾಗಿ ಸುಧಾರಿಸಿದೆ ಎಂದು ತಿಳಿಸಿದೆ.
ಜನನ ಸಮಯದಲ್ಲಿ ಲಿಂಗ ಅನುಪಾತವು ರಾಷ್ಟ್ರಮಟ್ಟದಲ್ಲಿ ಸುಧಾರಿಸಿದೆ. 2017-19ರ ಅವಧಿಯಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 904 ರಷ್ಟಿದ್ದ ಹೆಣ್ಣುಮಕ್ಕಳ ಸಂಖ್ಯೆಯು, 2021-23ರ ಅವಧಿಯಲ್ಲಿ 917 ಕ್ಕೆ ಏರಿಕೆಯಾಗಿದೆ. ಇದು ಹೆಣ್ಣುಮಕ್ಕಳ ಉಳಿವು ಮತ್ತು ಆರೈಕೆಯಲ್ಲಿನ ಪ್ರಗತಿಯನ್ನು ಸೂಚಿಸುತ್ತದೆ.
ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ರೌಢ ಶಿಕ್ಷಣದವರೆಗೆ ಎಲ್ಲಾ ಹಂತಗಳಲ್ಲಿ ಲಿಂಗ ಸಮಾನತೆ ಸಾಧಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಒಟ್ಟು ದಾಖಲಾತಿ ಅನುಪಾತವು (GER) 28.5 ರಿಂದ 30.2 ಕ್ಕೆ ಸುಧಾರಿಸಿದೆ.
ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರ ಶ್ರಮದಾಯಕ ಸಹಭಾಗಿತ್ವವು 2022-25ರ ಅವಧಿಯಲ್ಲಿ ಶೇ. 37.5 ರಿಂದ ಶೇ. 45.9 ಕ್ಕೆ ಏರಿಕೆಯಾಗಿದೆ.
ವ್ಯವಸ್ಥಾಪಕ ಹುದ್ದೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಶೇ. 102.54 ರಷ್ಟು ಹೆಚ್ಚಳ ಕಂಡಿದೆ.
ಏನಿದು ಲಿಂಗ-ಆಧಾರಿತ ದತ್ತಾಂಶ
ಸರ್ಕಾರವು ಈ ಬಾರಿ ಬಿಡುಗಡೆ ಮಾಡಿರುವ ದತ್ತಾಂಶವು ಕೇವಲ ಸಾಮಾನ್ಯ ಅಂಕಿಅಂಶಗಳಲ್ಲ. ಬದಲಿಗೆ ಶಿಕ್ಷಣ, ಆರೋಗ್ಯ, ಆರ್ಥಿಕ ಭಾಗವಹಿಸುವಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುರುಷರು ಮತ್ತು ಮಹಿಳೆಯರ ಸ್ಥಿತಿಗತಿಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸಲಾಗಿದೆ.
https://www.newsics.com/2026/04/30/government-to-impose-new-tax-on-out-of-state-registered-vehicles/