https://youtube.com/shorts/7-1-Ue0Sh8o?si=UJX_wGWxwj6xGzu4
newsics.com
ಬೆಂಗಳೂರು : ಯಾವುದೋ ಅನಧಿಕೃತ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಟಿಕೆಟ್ ಖರೀದಿಗೆ ಮುಂದಾದರೆ ಮೋಸ ಹೋಗಬೇಕಾಗುತ್ತದೆ. ಇಂತದ್ದೇ ಮೋಸದ ಜಾಲಕ್ಕೆ ಸಿಲುಕಿ ಬೆಂಗಳೂರಿನ ಓರ್ವ ಟೆಕ್ಕಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಬಿ.ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿ ಟಿಕೆಟ್ ಮಾರಾಟಗಾರನಂತೆ ನಟಿಸಿ ವಂಚಿಸಿದ್ದಾನೆ.
ತನ್ನನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡ ಆರೋಪಿಯು, ಐಪಿಎಲ್ ಪಂದ್ಯಕ್ಕೆ ಟಿಕೆಟ್‌ಗಳ ಜೊತೆಗೆ ಊಟದ ಕೂಪನ್‌ಗಳು ಮತ್ತು ವಿಶೇಷ ಸೌಲಭ್ಯಗಳನ್ನು ಒದಗಿಸುವುದಾಗಿ ನಂಬಿಕೆ ಮೂಡಿಸಿದ್ದ. ಆರಂಭದಲ್ಲಿ ಎರಡು ಟಿಕೆಟ್‌ಗಳಿಗೆ 3,700 ರೂ. ದರ ನಿಗದಿ ಮಾಡಿದ್ದರೂ, ನಂತರ ಭದ್ರತಾ ಠೇವಣಿ, ಹೆಚ್ಚುವರಿ ಐಡಿ ಕಾರ್ಡ್ ಹಾಗೂ ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಕೇಳಿದ್ದ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ, ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದ ಎಂದು ನೊಂದ ವ್ಯಕ್ತಿ ಹೇಳಿದ್ದಾರೆ.
ಆರೋಪಿಯ ಮಾತನ್ನು ನಂಬಿದ ವ್ಯಕ್ತಿ ತನ್ನ ಖಾತೆಯ ಜೊತೆಗೆ ತಾಯಿಯ ಖಾತೆಯಿಂದಲೂ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದ್ದು, ಒಟ್ಟು 1.46 ಲಕ್ಷ ರೂ.ಪಾವತಿಸಿರುವುದಾಗಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.