newsics.com
ಸೇಲಂ: ನಿಯಂತ್ರಣ ತಪ್ಪಿ ಟೆಂಪೋ, ದ್ವಿಚಕ್ರ ವಾಹನಕ್ಕೆ TNSTC ಬಸ್ ಡಿಕ್ಕಿಯಾಗಿ ಎಂಟು ಮಂದಿ ಮೃತಪಟ್ಟಿರುವ ಘಟನೆ ತಮಿಳು ನಾಡಿನ ಸೇಲಂ ರಾಷ್ಟ್ರೀಯ ಹೆದ್ದಾರಿಯ ಉತ್ಥಮಸೋಲಾಪುರಂ ಸಮೀಪದ ಅರಿಯನೂರು ಬಳಿ ನಡೆದಿದೆ. ಈ ಭೀಕರ ಅಪಘಾತ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮೃತರನ್ನು ಸೆಲ್ವರಾಜ್, ಮುರುಗನ್, ಅಮುದಾ, ಮನಿಕಂದನ್, ಇರುಸಾಯಿ, ಸತ್ಯ (ಮನಿಕಂದನ್ ಅವರ ಪತ್ನಿ), ಐದು ವರ್ಷದ ನಿಧಿಷಾ ಮತ್ತು 11 ತಿಂಗಳ ಜೀವುಕಾ ಎಂದು ಗುರುತಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕೊಯಂಬತ್ತೂರಿನಿಂದ ಸೇಲಂ ಕಡೆಗೆ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಈ ಬಸ್ ತನ್ನ ಲೇನ್‌ನಿಂದ ತಪ್ಪಿ, ಮಧ್ಯದ ಡಿವೈಡರ್ ದಾಟಿ ಎದುರು ದಾರಿಯಲ್ಲಿ ಪ್ರವೇಶಿಸಿದೆ. ಸಿಸಿಟಿವಿ ದೃಶ್ಯಗಳಲ್ಲಿ ಬಸ್ ಎದುರು ದಾರಿಯಲ್ಲಿ ಬರುತ್ತಿದ್ದ ಟೆಂಪೋ ಮಾದರಿಯ ಸರಕು ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆಯುತ್ತಿರುವುದು ಕಾಣಿಸುತ್ತದೆ.
ಸರಕು ಆಟೋದಲ್ಲಿ ಒಂದೇ ಕುಟುಂಬದ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಅವರು ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ.
ಹಲವರಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.