Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ಬಾಸ್ ಕನ್ನಡ ಸೀಸನ್ 12 ಗೆದ್ದಿರುವ ಗಿಲ್ಲಿಗೆ ಎಲ್ಲಿಲ್ಲದ ಜನಪ್ರಿಯತೆ ದೊರೆತಿದೆ. ಗಿಲ್ಲಿ ಹೋದಲ್ಲೆಲ್ಲ ಅಭಿಮಾನಿಗಳು ಸೇರುತ್ತಿದ್ದಾರೆ, ಜಯಕಾರಗಳನ್ನು ಹಾಕುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಗಿಲ್ಲಿ ತೋರಿದ ಪ್ರತಿಭೆಯ ಪ್ರದರ್ಶನ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿದೆ. ಬಿಗ್ಬಾಸ್ ಗೆಲುವು ಗಿಲ್ಲಿಗೆ ಹಲವು ಹೊಸ ಅವಕಾಶಗಳನ್ನು ಸಹ ತಂದುಕೊಡುತ್ತಿದೆ. ಇವುಗಳ ಜೊತೆಗೆ ಗಿಲ್ಲಿಗೆ ಇದೀಗ ಹೊಸ ಸಂಕಷ್ಟವೊಂದು ಶುರುವಾಗಿದೆ. ಗಿಲ್ಲಿ ವಿರುದ್ಧ ದೂರೊಂದು ದಾಖಲಾಗಿದ್ದು, ಗಿಲ್ಲಿ ನಟಿಸಿರುವ ಸಿನಿಮಾ ಒಂದರ ನಿರ್ಮಾಪಕರು ಗಿಲ್ಲಿ ನಟ ವಿರುದ್ಧ ದೂರು ನೀಡಿದ್ದಾರೆ.
ಗಿಲ್ಲಿ, ಬಿಗ್ಬಾಸ್ಗೆ ಹೋಗುವ ಮುಂಚೆ ‘ಸರ್ಕಾರಿ ಶಾಲೆ ಎಚ್8’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಇದೀಗ ಸಿನಿಮಾ ಬಿಡುಗಡೆ ಇಂದು (ಫೆಬ್ರವರಿ 6) ಆಗಿದೆ. ಈ ಹಂತದಲ್ಲಿ ಗಿಲ್ಲಿಯ ವಿರುದ್ಧ ಸಿನಿಮಾದ ನಿರ್ಮಾಪಕ ತೇಜಸ್ವಿ ಎಸ್ ಅವರು ಫಿಲಂ ಚೇಂಬರ್ಗೆ ದೂರು ನೀಡಿದ್ದಾರೆ. ಗಿಲ್ಲಿ, ಸಂಭಾವನೆ ಪಡೆದು ಸಿನಿಮಾನಲ್ಲಿ ನಟಿಸಿದ್ದಾರೆ ಆದರೆ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಸಿನಿಮಾನಲ್ಲಿ ನಾವು ಗಿಲ್ಲಿಗೆ ಪ್ರಮುಖ ಪಾತ್ರ ನೀಡಿದ್ದೀವಿ, ಬಿಗ್ಬಾಸ್ಗೆ ಹೋಗುವ ಮುಂಚೆಯೇ ಅವರು ಕೇಳಿದಷ್ಟು ಸಂಭಾವನೆಯನ್ನು ಸಹ ಕೊಟ್ಟಿದ್ದೀವಿ. ಆದರೆ ಅವರು ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ. ಎಷ್ಟು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ, ಕನಿಷ್ಟ ನಮ್ಮ ಸಿನಿಮಾದ ಬಗ್ಗೆ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಸಹ ಹಂಚಿಕೊಂಡಿಲ್ಲ ಎಂದು ನಿರ್ಮಾಪಕ ಆರೋಪ ಮಾಡಿದ್ದಾರೆ. ದೂರು ಸ್ವೀಕಾರ ಮಾಡಿರುವ ಚೇಂಬರ್, ಗಿಲ್ಲಿಯನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.