Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತುಮಕೂರು: ಯುವಕನ ಕಿರುಕುಳಕ್ಕೆ ಬೇಸತ್ತು ಎಂಟು ವರ್ಷದ ಮಗನೊಂದಿಗೆ ತಾಯಿ ಕೆರೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದ ತಾಯಿ ಹಂಸಲೇಖ(36) ಮತ್ತು ಪುತ್ರ ಗುರುಪ್ರಸಾದ್(8) ಎಂದು ಗುರುತಿಸಲಾಗಿದೆ..
ಹಂಸರೇಖ ಅವರ ಪತಿ ನಾಗೇಶ್ ನಾಲ್ಕೈದು ವರ್ಷಗಳ ಹಿಂದೆ ನಿಧನರಾಗಿದ್ದರು. ಆಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದ ಹಂಸರೇಖ ಅವರ ಭವಿಷ್ಯ ಹಾಳಾಗಬಾರದು ಎಂಬ ಉದ್ದೇಶದಿಂದ ಕುಟುಂಬಸ್ಥರು ಪತಿಯ ಸಹೋದರನೊಂದಿಗೆ ಮರುವಿವಾಹ ಮಾಡಿಸಿದ್ದರು. ಬಳಿಕ ಜೀವನೋಪಾಯಕ್ಕಾಗಿ ವಸಂತನರಸಾಪುರದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಯುವಕನೊಬ್ಬ ಹಂಸರೇಖ ಅವರ ಪರಿಚಯ ಮಾಡಿಕೊಂಡಿದ್ದ. ಆ ಪರಿಚಯ ಮುಂದುವರಿದು ಸ್ನೇಹವಾಗಿ, ಬಳಿಕ ಆತ್ಮೀಯತೆಯ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ. ಆದರೆ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಕಲಹ ಉಂಟಾಗಿ, ಹಂಸರೇಖ ಆ ಯುವಕನನ್ನು ದೂರ ಇಡಲು ಆರಂಭಿಸಿದ್ದರು. ಇದರಿಂದ ಕೋಪಗೊಂಡ ಯುವಕ, ಹಂಸರೇಖ ಅವರೊಂದಿಗೆ ನಡೆದಿದ್ದ ಫೋನ್ ಸಂಭಾಷಣೆಯ ಆಡಿಯೋವನ್ನು ಆಕೆಯ ಸಂಬಂಧಿಕರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ.
ಈ ವಿಚಾರ ತಿಳಿದ ಹಂಸರೇಖ ಅವರ ಅಣ್ಣ ಯುವಕನಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿಹೋದ ಹಂಸರೇಖ, ತೀವ್ರ ನಿರಾಶೆಗೆ ಒಳಗಾಗಿ ತನ್ನ ಎಂಟು ವರ್ಷದ ಪುತ್ರ ಗುರುವನ್ನೊಂದಿಗೆ ಕಳ್ಳೆಂಬಳ್ಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ದುರ್ಘಟನೆಯಲ್ಲಿ ತಾಯಿ ಹಾಗೂ ಒಬ್ಬ ಮಗ ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬ ಮಗ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಯುವಕನ ಬಂಧನಕ್ಕಾಗಿ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.
https://www.newsics.com/2026/01/01/towing-drivers-rude-behavior-towards-woman/