Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದಾವಣಗೆರೆ: ಭಾನುವಾರ ನಿಧನರಾದ ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ ಸೋಮವಾರ ನೆರವೇರಿತು.
ಶಾಮನೂರು ಒಡೆತನದ ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಶಾಮನೂರು ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ ಮಾಡಲಾಯಿತು.
ಹಿರಿಯನನ್ನು ಕಳೆದುಕೊಂಡ ಶಾಮನೂರು ಕುಟುಂಬಸ್ಥರು ಕಣ್ಣೀರಿಟ್ಟರು.
ವೀರಶೈವ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿದ್ದು, ಪಂಚಪೀಠಾಧೀಶ್ವರರ ಪಾದೋದಕ ಮೂಲಕ ಪೂಜೆ ನಡೆಸಲಾಯ್ತು. ಮಣ್ಣು ಬಳಸದೇ ವಿಭೂತಿ ಬಳಸುವ ಕ್ರಿಯಾ ಸಮಾಧಿ ಬಳಿಕ ಪಾರ್ಥಿವ ಶರೀರಕ್ಕೆ ಅಭಿಷೇಕ ಮಾಡಲಾಯಿತು. ಶಿವ-ಪಾರ್ವತಿ ಎನ್ನುವ ಪದ್ದತಿ ಮೂಲಕ ಧರ್ಮಪತ್ನಿ ಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡಿದ್ದು ವಿಶೇಷ.
ಈ ವೇಳೆ ವೀರಶೈವ ಲಿಂಗಾಯತ ಸಮುದಾಯದ ಹಲವು ಸ್ವಾಮೀಜಿಗಳೂ ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ರಾಜಕೀಯ ರಂಗದವರು, ಅಭಿಮಾನಿಗಳು, ಸಾರ್ವಜನಿಕರು ಈ ವೇಳೆ ಭಾಗಿಯಾಗಿ, ಅಂತಿಮ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ಕಲ್ಲೇಶ್ವರ ರೈಸ್ ಮಿಲ್‌ವರೆಗೆ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ತಂದೆಯ ಪಾರ್ಥಿವ ಶರೀರಕ್ಕೆ ಪುತ್ರ ಎಸ್ಎಸ್ ಮಲ್ಲಿಕಾರ್ಜುನ್ ಹೆಗಲು ಕೊಟ್ಟರು. ಇನ್ನು ಇತ್ತ ಶಾಮನೂರು ಸೊಸೆ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಮಾವನ ಅಂತ್ಯಸಂಸ್ಕಾರದ ಬಳಿಕ ಸಮಾಧಿ ಬಳಿ ಇಡಲು ದೀಪ ತಂದಿದ್ದರು.
ವೀರಶೈವ ಲಿಂಗಾಯತ ಪದ್ಧತಿಯ ಪ್ರಕಾರ ಅಂತ್ಯಸಂಸ್ಕಾರಕ್ಕೂ ಮುನ್ನ ಜಂಗಮರಿಗೆ ದಾನ ಕೊಡಲಾಯಿತು.
ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಮೆರವಣಿಗೆ ವಾಹನದಲ್ಲಿ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಭಜನೆ ಮಾಡಿದರು. ಶಾಸಕ ಬಸವಂತಪ್ಪ ಅವರು ಹೈಸ್ಕೂಲ್ ಗ್ರೌಂಡ್‌ನಿಂದ ಕಲ್ಲೇಶ್ವರ ರೈಸ್ ಮಿಲ್‌ವರೆಗೆ ಭಜನೆ ಮಾಡಿ, ಹಿರಿಯ ನಾಯಕನಿಗೆ ಗೌರವ ಸಲ್ಲಿಸಿದರು.
ಈ ವೇಳೆ ಕುಶಾಲ ತೋಪು ಸಿಡಿಸಿ, ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದೆಸಿ, ಸರ್ಕಾರದಿಂದ ಗೌರವ ಸಲ್ಲಿಸಲಾಯಿತು.
ಬಿವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಹೆಚ್‌ಡಿ ರೇವಣ್ಣ ಸೇರಿದಂತೆ ಜೆಡಿಎಸ್ ನಾಯಕರೂ ಕೂಡ ಭಾಗಿಯಾಗಿ ಶಿವಶಂಕರಪ್ಪನವರಿಗೆ ಅಂತಿಮ ನಮನ ಸಲ್ಲಿಸಿದರು.
ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ ನೋಡಲು, ಅಂತಿಮ ಸಂಸ್ಕಾರ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿದ್ದರು. ಕಲ್ಲೇಶ್ವರ ರೈಸ್ ಮಿಲ್ ಒಳಗೆ ಆಗಮಿಸಿದ ಅಪಾರ ಸಂಖ್ಯೆಯ ಸಾರ್ವಜನಿಕರು ಬ್ಯಾರಿಕೇಡ್ ಹಿಂಭಾಗದಲ್ಲಿ ನಿಂತು ಅಂತ್ಯಸಂಸ್ಕಾರ ವೀಕ್ಷಿಸಿದರು.
Actress Geetha Bharathi Bhat marriage ಸದ್ದಿಲ್ಲದೆ ಸಪ್ತಪದಿ ತುಳಿದ ನಟಿ ಗೀತಾ ಭಾರತಿ ಭಟ್
ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಶವದ ಜೊತೆ ಪೊಲೀಸ್ ಠಾಣೆಗೆ ಬಂದ ಪತಿ