Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಳಗಾವಿ ಚಳಿಗಾಲದ ಅಧಿವೇಶನದ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರನ್ನು ನೋಡಿ, ‘ಏನು ಅಶೋಕ್, ಸಣ್ಣಗಾಗಿದ್ಯಾ?’ ಎಂದು ತಕ್ಷಣ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ‘ನಾಟಿ ಕೋಳಿ ತಿನ್ನುವುದು ಬಿಟ್ಟುಬಿಟ್ಟಿದ್ದೀನಿ ಸಾರ್’ ಎಂದು ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಸುವರ್ಣಸೌಧದ ಮೊಗಸಾಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಇತರ ಶಾಸಕರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೌಪಚಾರಿಕ ಮಾತುಕತೆಯಲ್ಲಿ ನಿರತರಾಗಿದ್ದರು. ಅಧಿವೇಶನದ ಅಜೆಂಡಾ ಮತ್ತು ಸದನ ಸಲಹಾ ಸಮಿತಿ ಸಭೆ ನಡೆಸುವ ಕುರಿತು ಸ್ಪೀಕರ್ ಅವರ ಜೊತೆ ಚರ್ಚೆ ನಡೆಸಿದ ನಂತರ, ಸಿಎಂ ಮತ್ತು ಅಶೋಕ್ ಅವರು ಉಭಯ ಕುಶಲೋಪರಿ ವಿಚಾರ ವಿನಿಮಯ ಮಾಡಿಕೊಂಡರು.
ಕುಶಲೋಪರಿ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರನ್ನು ನೋಡಿ, ‘ಏನು ಅಶೋಕ್, ಸಣ್ಣಗಾಗಿದ್ಯಾ?’ ಎಂದು ತಕ್ಷಣ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ‘ನಾಟಿ ಕೋಳಿ ತಿನ್ನುವುದು ಬಿಟ್ಟುಬಿಟ್ಟಿದ್ದೀನಿ ಸಾರ್’ ಎಂದು ಹೇಳಿದ್ದಾರೆ.
ಇದಕ್ಕೆ ತಕ್ಷಣವೇ ಹಾಸ್ಯಮಿಶ್ರಿತ ಧ್ವನಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಏಯ್, ಅದೆಲ್ಲಾ ಬಿಡಬಾರದು. ನೀನು ತಿನ್ನಬೇಕು, ಏನೂ ಆಗಲ್ಲ’ ಎಂದು ಸಲಹೆ ನೀಡಿದ್ದಾರೆ. ಆಡಳಿತ ಮತ್ತು ವಿಪಕ್ಷ ನಾಯಕರು ಈ ರೀತಿ ಪರಸ್ಪರ ಹಗುರವಾಗಿ ಮಾತುಕತೆ ನಡೆಸಿ ನಕ್ಕಿದ್ದು, ಅಲ್ಲಿನ ವಾತಾವರಣವನ್ನು ನಗೆಗಡಲಲ್ಲಿ ತೇಲಿಸಿತು. ನಾಟಿ ಕೋಳಿ ತಿನ್ನುವ ಕುರಿತು ಸಿಎಂ ನೀಡಿದ ಸಲಹೆ ಅಲ್ಲಿ ನೆರೆದಿದ್ದ ಎಲ್ಲರ ಮುಖದಲ್ಲಿ ನಗು ತರಿಸಿತ್ತು.
ಈ ಮಾತುಕತೆಯ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಜೊತೆ ‘ಬಾ ಒಂದು ಫೋಟೋ ತೆಗೆದುಕೊಳ್ಳೋಣ’ ಎಂದು ಹೇಳಿ ಜೊತೆಯಾಗಿ ಪೋಟೋ ತೆಗೆಸಿಕೊಂಡರು. ಇವರಿಬ್ಬರ ಫೋಟೋ ಸೆಷನ್ ನಡೆಯುತ್ತಿದ್ದಾಗಲೇ, ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ತಕ್ಷಣ ಮಧ್ಯಪ್ರವೇಶಿಸಿ, ‘ಸಾರ್, ಇದೇ ಅಧಿವೇಶನ ಸಿಎಂ ಆಗಿ ನಿಮಗೆ ಕೊನೆಯದಾ?’ ಎಂದು ಕಾಲೆಳೆದರು.
ಈ ವೇಳೆ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದ್ದಾರೆ. ಈ ವೇಳೆ ಸಿಎಂ, ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಕಿಚಾಯಿಸಿದರು. ಇದಕ್ಕೆ ಇಬ್ಬರು ನಾಯಕರು ಯಾವುದೇ ಉತ್ತರ ನೀಡದೇ ನಕ್ಕಿದರು. ಆದರೆ, ಸುನೀಲ್ ಕುಮಾರ್ ಅವರ ಈ ರಾಜಕೀಯ ವ್ಯಂಗ್ಯದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೂ ಮಾತನಾಡದೇ ಸುಮ್ಮನಾದರು.