Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಹಲವು ವರ್ಷಗಳಿಂದ ಗ್ರಾಮದಲ್ಲಿ ಮೂಲಸೌಕರ್ಯಗಳಿಲ್ಲದೆ ಒದ್ದಾಡುತ್ತಿದ್ದಾರೆ. ಈ ಸಮಸ್ಯೆಯನ್ನು ನಗರಸಭೆಯ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಗದಗನ ಬೆಟಗೇರಿ ಗ್ರಾಮದ 8 ನೇ ತರಗತಿಯ ವಿದ್ಯಾರ್ಥಿಯೋರ್ವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾನೆ.
ಹದಗೆಟ್ಟ ರಸ್ತೆ, ಚರಂಡಿಯ ಅವ್ಯವಸ್ಥೆ ಸೇರಿದಂತೆ ಬೆಟಗೇರಿಯ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ರಸ್ತೆಯಲ್ಲಿ ಗ್ರಾಮಸ್ಥರಿಗೆ ಓಡಾಡಲು ಕಷ್ಟವಾಗುತ್ತಿದೆ. ದಿನನಿತ್ಯ ಮನೆಯ ಮುಂದೆ ಆಟವಾಡುವದೂ ಕಷ್ಟವಾಗಿದೆ ಎಂದು ಮಕ್ಕಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಇದೇ ವ್ಯವಸ್ಥೆಯಲ್ಲಿರುವ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದನ್ನು ಸ್ಥಳೀಯ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಬದಲಾವಣೆ ಕಾಣದಾಗಿದೆ. ಈ ಎಲ್ಲಾ ಅವ್ಯವಸ್ಥೆಯಿಂದ ನೊಂದ ಬಾಲಕ ಸಾಯಿರಾಮ್, ಪ್ರಧಾನಿಗೆ ಪತ್ರ ಬರೆದಿದ್ದಾನೆ.
ತಾನು ಸೇಂಟ್ ಜಾನ್ಸ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದು, ತನ್ನ ಮನೆಯ ಮುಂದಿನ ರಸ್ತೆ ಹಾಗೂ ಓಣಿಯ ರಸ್ತೆ ಹದಗೆಟ್ಟಿದೆ ಎಂದು ತನ್ನ ಪತ್ರದಲ್ಲಿ ಬರೆದುಕೊಂಡಿರುವ ಬಾಲಕ, ಪರಿಹಾರ ಒದಗಿಸುವಂತೆ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾನೆ. ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಕೆಸರು ತುಂಬಿದೆ. ನಾನೇ ಹಲವು ಬಾರಿ ಕೆಸರಲ್ಲಿ ಬಿದ್ದಿದ್ದೇನೆ ಎಂದು ತನ್ನ ಗೋಳು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಕುಡಿಯುವ ನೀರೂ ಸರಿಯಾದ ಸಮಯಕ್ಕೆ ಬರುವುದಿಲ್ಲ,ನಮಗೆ ಕಷ್ಟವಾಗುತ್ತಿದೆ. ಹೀಗಾಗಿ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಿ ಎಂದು ತನ್ನ ಪತ್ರದಲ್ಲಿ ವಿನಂತಿಸಿಕೊಂಡಿದ್ದಾನೆ. ಬಾಲಕ ಮೋದಿಗೆ ಪತ್ರ ಬರೆದಿರುವುದರಿಂದ ಬಡಾವಣೆಯ ಜನರು ಆನಂದದಲ್ಲಿದ್ದು, ಪ್ರಧಾನಿಯಿಂದ ಸ್ಪಂದನೆ ಸಿಗುವ ಭರವಸೆಯಲ್ಲಿದ್ದಾರೆ.
ಡೇಟಿಂಗ್ ಆ್ಯಪ್ ನಲ್ಲಿ ಡಿಂಗ್ ಡಿಂಗ್ ಮಾಡಿ ಸಿಕ್ಕಿಬಿದ್ದ ಜೋಡಿ; ಹಣದ ದುರಾಸೆಗೆ ಈ ಟೆಕ್ಕಿಗಳು ಮಾಡಿದ್ದೇನು?