Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವ್ಯಕ್ತಿಯೊರ್ವ ಸತತ 62 ವರ್ಷಗಳಿಂದ ಒಂದು ಸೆಕೆಂಡ್ ಕೂಡ ನಿದ್ದೆ ಮಾಡದೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಎಚ್ಚರವಾಗಿಯೇ ಇದ್ದಾರೆ. 1942ರಲ್ಲಿ ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದ ಒಂದು ಸಣ್ಣ ಹಳ್ಳಿಯಲ್ಲಿ ಥಾಯ್ ಎನ್‌ಗೋಕ್‌ನ ಜನನವಾಗುತ್ತದೆ. 1962 ರ ಸಮಯ, ವಿಯೆಟ್ನಾಂನಲ್ಲಿ ಯುದ್ಧದ ವಾತಾವರಣ, ಎನ್‌ಗೋಕ್ ಆಗಷ್ಟೇ ತನ್ನ 20ನೇ ವರ್ಷಕ್ಕೆ ಕಾಲಿಟ್ಟಿದ್ದರು. ಆದರೆ ಆ ವರ್ಷ ಅವರಿಗೆ ತೀವ್ರ ಜ್ವರ ಬಾಧಿಸಿತ್ತು. ಹಲವಾರು ಚಿಕಿತ್ಸೆಗಳ ಬಳಿಕ ಆತ ಗುಣಮುಖರಾಗುತ್ತಾರೆ. ಆದರೆ ಜ್ವರ ದೇಹ ಬಿಟ್ಟು ಹೋದಂತೆಯೇ ಅವರ ನಿದ್ದೆಯನ್ನು ಕಸಿದುಕೊಂಡು ಹೋಗಿತ್ತು.
ನಾನು ನಿದ್ದೆ ಮಾಡಬೇಕೆಂದು ಬಹಳಷ್ಟು ಔಷಧಗಳನ್ನು ತೆಗೆದುಕೊಂಡೆ, ಮನೆಮದ್ದುಗಳನ್ನು ಮಾಡಿದೆ, ಕೊನೆಗೆ ಮದ್ಯಪಾನವನ್ನೂ ಸಹ ಸೇವಿಸಿದೆ… ಆದರೆ ಯಾವುದು ಕೂಡ ಕೆಲಸ ಮಾಡಲಿಲ್ಲ” ಎಂದು ಎನ್‌ಗೋಕ್ ಹೇಳುತ್ತಾರೆ.
ಅವರ ಪತ್ನಿ, ಮಕ್ಕಳು, ಸ್ನೇಹಿತರು ಹಾಗೂ ನೆರೆಹೊರೆಯವರು ಕೂಡ, ತಾವು ಎನ್‌ಗೋಕ್ ಮಲಗಿದ್ದನ್ನು ಇದುವರೆಗು ನೋಡಿಯೇ ಇಲ್ಲವೆಂದು ಹೇಳುತ್ತಾರೆ. ಈಗ ಎನ್‌ಗೋಕ್ ಅವರಿಗೆ 81 ವರ್ಷ ವಯಸ್ಸು. ಕೃಷಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, 1962ರಲ್ಲಿ ಬಂದ ತೀವ್ರ ಜ್ವರದ ಬಳಿಕ ಒಂದು ಸೆಕೆಂಡ್ ಕೂಡ ನಿದ್ದೆ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಾರೆ.
ವಿಜ್ಞಾನವು, ಮನುಷ್ಯ ನಿದ್ರೆಯಿಲ್ಲದೆ ಕೆಲವು ದಿನಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಹಾಗಾಗಿ ಈ ವ್ಯಕ್ತಿಯ ವಿಷಯದಲ್ಲಿ ವೈದ್ಯರು ಕೂಡ ಆಶ್ಚರ್ಯಗೊಂಡಿದ್ದಾರೆ.
ಇಷ್ಟಲ್ಲಾ ಆದರೂ ಎನ್‌ಗೋಕ್‌ಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಅವರು ತನ್ನ 81 ನೇ ವಯಸ್ಸಿನಲ್ಲಿಯೂ ಜಮೀನಿನಲ್ಲಿ ಬಹಳ ಶ್ರಮಪಟ್ಟು ಕೆಲಸ ಮಾಡುತ್ತಾರೆ. ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ತಾವೇ ಮಾಡುತ್ತಾರೆ.
ನಂತರದ ದಿನಗಳಲ್ಲಿ ಎನ್‌ಗೋಕ್ ಅವರ ಬಗ್ಗೆ ಸಾಮಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿಯಾಗುತ್ತದೆ.
ಈ ಮೂಲಕ ಇವರ ಬಗ್ಗೆ ತಿಳಿದುಕೊಂಡ ಡ್ರೂ ಬಿನ್ಸ್ಕಿ ಎಂಬ ಯ್ಯೂಟ್ಯೂಬರ್, 2023ರಲ್ಲಿ ಅರಿಜೋನಾದಿಂದ ವಿಯೆಟ್ನಾಂಗೆ ಪ್ರಯಾಣ ಬೆಳೆಸುತ್ತಾರೆ. ಎನ್‌ಗೋಕ್ ಅವರನ್ನು ಭೇಟಿ ಮಾಡಿ, ಅವರೊಂದಿಗೆ ರಾತ್ರಿಯಿಡೀ ಕಳೆಯುತ್ತಾರೆ. ಆದರೆ ರಾತ್ರಿಯಿಡೀ ಎನ್‌ಗೋಕ್ ಎಚ್ಚರವಿದ್ದು ಅಕ್ಕಿ ವೈನ್ ತಯಾರಿಸುತ್ತಿದ್ದರು ಎಂದು ಡ್ರೂ ಬಿನ್ಸ್ಕಿ ತಮ್ಮ ವಿಡಿಯೋವೊಂದರಲ್ಲಿ ಹಂಚಿಕೊಂಡಿದ್ದಾರೆ.
ಇಡಿ ದಿವಸ ಎಚ್ಚರದಿಂದಿರುವ ಎನ್‌ಗೋಕ್ ಹಗಲು ಹೊತ್ತಿನಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಭಾರವಾದ ಹೊರೆಗಳನ್ನು ಎತ್ತುತ್ತಾರೆ. ರಾತ್ರಿ ಹೊತ್ತಿನಲ್ಲಿ, ಇತರರು ಮಲಗಿದ ಮೇಲೆಯೂ, ಅವರು ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ, ವೈನ್ ತಯಾರಿಸುತ್ತಾರೆ. ವಿಶೇಷ ಎಂದರೆ ಅವರು ಪ್ರತಿದಿನ 40-ಬಾಟಲ್‌ಗಳಷ್ಟು ರೈಸ್ ವೈನ್ ಕುಡಿಯುತ್ತಾರೆ. ಜೊತೆಗೆ ಸುಮಾರು 70 ಸಿಗರೇಟ್‌ಗಳನ್ನು ಸೇದುತ್ತಾರೆ.